ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೀಗ ಮಾಸ್ಕ್ ದಂಡದ ಮೊತ್ತವನ್ನು ದೆಹಲಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಳ ಮಾಡಿದೆ.
ದೆಹಲಿಯಲ್ಲಿ ಪ್ರತಿದಿನ 6-7 ಸಾವಿರ ಜನರಲ್ಲಿ ಕೋವಿಡ್ ಸೋಂಕು ಹೊಸದಾಗಿ ಪತ್ತೆಯಾಗುತ್ತಿದ್ದು, ನಿನ್ನೆಯೊಂದೇ ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಚಳಿಗಾಲ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ 15 ಸಾವಿರದವರೆಗೂ ದೆಹಲಿಯಲ್ಲಿ ಕೋವಿಡ್ ಕೇಸ್ ಪತ್ತೆಯಾಗುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರ ಬೇಜವಾಬ್ದಾರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ನಾಲ್ಕುಪಟ್ಟು ದಂಡದ ಮೊತ್ತ ಹೆಚ್ಚಿಸಿದೆ.
500ರೂ. ಇದ್ದ ಮಾಸ್ಕ್ ದಂಡದ ಮೊತ್ತವನ್ನು ಇದೀಗ 2000 ರೂ.ಗೆ ಹೆಚ್ಚಳ ಮಾಡಿದೆ. ಮಾಸ್ಕ್ ಧರಿಸದೇ ಜನರು ನಿರ್ಲಕ್ಷ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ದಂಡವನ್ನು ಹೆಚ್ಚಿಸಲಾಗಿದೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.