ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ದೆಹಲಿಯ ಲೋಧಿ ಚಿತಾಗಾರದಲ್ಲಿ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಮಾಜಿ ರಾಷ್ಟ್ರಪತಿ ಅಂತ್ಯಕ್ರಿಯೆಯನ್ನು ಕುಟುಂಬ ವರ್ಗ ನೆರವೇರಿಸಿದ್ದು, ಈ ವೇಳೆ ಕೊವಿಡ್ ನಿಯಮಗಳಂತೆ ಪಿಪಿಇ ಕಿಟ್ ಧರಿಸಿ ಕುಟುಂಬ ಹಾಗೂ ಸರ್ಕಾರದ ಸಿಬ್ಬಂದಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ರಾಜಾಜಿ ಮಾರ್ಗ ರಸ್ತೆಯಲ್ಲಿರುವ ಪ್ರಣಬ್ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಮಾಜಿ ರಾಷ್ಟ್ರಪತಿ ನಿಧನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಣಬ್ ಮುಖರ್ಜಿ ಆ.10ರಂದು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರನ್ನು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅದಾದ ಬಳಿಕ ಅವರು ಕೋಮಾಗೆ ಜಾರಿದ್ದರಲ್ಲದೇ ಕೆಲ ದಿನಗಳ ಹಿಂದೆ ಕೊವಿಡ್ ಸೋಂಕಿನಿಂದಲೂ ಬಳಲುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದಾಗಿ ಅವರು ನಿನ್ನೆ ವಿಧಿವಶರಾಗಿದ್ದರು.