ಮಹಾಮಾರಿ ಕೊರೊನಾ ಸಾರ್ವಜನಿಕರ ಬದುಕನ್ನು ನರಕವನ್ನಾಗಿಸಿದೆ. ಸೋಂಕು ತಗುಲುವ ಭೀತಿಯಿಂದ ಪ್ರೀತಿಪಾತ್ರರನ್ನೇ ಆತ್ಮೀಯವಾಗಿ ಮಾತನಾಡಿಸುವ ಅವಕಾಶ ಇಲ್ಲದಂತಾಗಿದೆ. ಇದರ ಮಧ್ಯೆ ಆಂಧ್ರಪ್ರದೇಶದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರ ಮನ ಕಲಕುತ್ತದೆ.
ಕೊರೊನಾ ಸೋಂಕು ತಗುಲುತ್ತದೆ ಎಂಬ ಭೀತಿಯಿಂದ ವ್ಯಕ್ತಿಯೊಬ್ಬ ಆಗಷ್ಟೇ ಜನಿಸಿದ ತನ್ನ ಮಗುವಿನ ಮೃತದೇಹವನ್ನು ಕಾಲುವೆಗೆ ಎಸೆದಿದ್ದು, ದಾರಿಹೋಕರಿಂದ ಮಾಹಿತಿ ಪಡೆದ ಪೊಲೀಸರು ಇದೀಗ ಮಗುವಿನ ಅಂತ್ಯಸಂಸ್ಕಾರವನ್ನು ನಡೆಸುವಂತೆ ಪೋಷಕರ ಮನವೊಲಿಸಿದ್ದಾರೆ.
ಕರ್ನೂಲು ಜಿಲ್ಲೆಯ ಈ ವ್ಯಕ್ತಿಯ ಪತ್ನಿ ನಂದ್ಯಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಮಗು ಹೊಟ್ಟೆಯಲ್ಲೇ ಮೃತಪಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಅದನ್ನು ತೆಗೆದಿದ್ದರು. ಆದರೆ ಈ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿರುವ ಕಾರಣ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ಹೇಳಲಾಗಿದ್ದು, ಹೀಗಾಗಿ ಆ ವ್ಯಕ್ತಿ ವಿಧಿಯಿಲ್ಲದೆ ತನ್ನ ಮಗುವಿನ ಮೃತದೇಹವನ್ನು ಕಾಲುವೆಗೆ ಎಸೆದಿದ್ದ ಎನ್ನಲಾಗಿದೆ.