ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂಥವರ ನೆರವಿಗೆ ಧಾವಿಸಿದ್ದ ಕೇಂದ್ರ ಸರ್ಕಾರ ಪಡೆದ ಸಾಲಗಳ ಕಂತು ಪಾವತಿ ಅವಧಿಯನ್ನು ಮುಂದೂಡಿಕೆ ಮಾಡಿತ್ತು.
ಇದು ಸಾಕಷ್ಟು ಅನುಕೂಲಕರವಾಗಿತ್ತಾದರೂ ಮುಂದೂಡಿಕೆಯಾಗಿರುವ ಸಾಲಗಳ ಕಂತಿನ ಮೇಲೆ ಬಡ್ಡಿ ವಿಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಉತ್ತರಪ್ರದೇಶದ ಗಜೇಂದ್ರ ಶರ್ಮಾ ಎಂಬವರು ಬ್ಯಾಂಕ್ ಗಳ ಕ್ರಮವನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ಗುರುವಾರದಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು, ಬ್ಯಾಂಕುಗಳು ಬಡ್ಡಿ ವಿಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಂತು ಪಾವತಿಗೆ ಕಾಲಾವಕಾಶ ನೀಡಿ ಮತ್ತೊಂದೆಡೆ ಬಡ್ಡಿಗೆ ಅದನ್ನು ಅನ್ವಯಿಸದಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಡಲಾಗಿದೆ. ಇದರ ಮುಂದಿನ ವಿಚಾರಣೆ ಜೂನ್ 12ಕ್ಕೆ ನಿಗದಿಯಾಗಿದ್ದು, ಸಾಲ ಪಡೆದ ಗ್ರಾಹಕರಿಗೆ ಸಿಹಿಸುದ್ದಿ ಸಿಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.