ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂಬ ವಾಕ್ಯ ಎಲ್ಲಾ ಸಿಗ್ನಲ್, ಹೆದ್ದಾರಿಗಳಲ್ಲಿ ನೋಡಬಹುದು. ಎಷ್ಟೇ ಮನವರಿಕೆ ಮಾಡಿಕೊಟ್ಟರು ಎಷ್ಟೋ ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಲೇ ಇದ್ದಾರೆ. ಇಂತವರಿಗೆ ಫೈನ್ ಹಾಕುವ ಕಾನೂನು ಇದ್ದರೂ ಇದು ಸಂಪೂರ್ಣವಾಗಿ ನಿಂತಿಲ್ಲ. ಆದರೆ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡಿಕೊಂಡು ಸತ್ತವರ ಪ್ರಮಾಣ ಇಳಿಕೆಯಾಗಿದೆ.
ಹೌದು, ಕಳೆದ ವರ್ಷಕ್ಕಿಂತ ಈ ವರ್ಷ ಕುಡಿದು ವಾಹನ ಚಲಾಯಿಸಿ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ. 2018ಕ್ಕೆ ಹೋಲಿಸಿಕೊಂಡರೆ 2019ರಲ್ಲಿ ಕುಡಿದು ಅಪಘಾತ ಮಾಡಿಕೊಂಡು ಸತ್ತವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಥವಾ ಆ ಹೆದ್ದಾರಿಗೆ ಹೊಂದಿಕೊಂಡಂತಹ ಜಾಗದಲ್ಲಿ ಮದ್ಯದಂಗಡಿಗಳನ್ನು ತೆರೆಯೋದಿಕ್ಕೆ ಆಯಾಯ ರಾಜ್ಯ ಸರ್ಕಾರಗಳು ಪರವಾನಿಗೆ ನೀಡಬಾರದು ಎಂದು ಕೇಂದ್ರ ಸೂಚಿಸಿದೆ. ಆದರೆ ಈ ರೀತಿಯ ನಿಯಮಗಳನ್ನು ಪುನರ್ ಪರಿಶೀಲಿಸುವಂತೆ ರಾಜ್ಯಗಳು ಕೇಂದ್ರವನ್ನು ಕೇಳಿಕೊಂಡಿವೆ.