ಮದುವೆಯ ನಂತರ ಎಲ್ಲವೂ ಸರಿಯಾಗಿ ನಡೆಯುತ್ತಿರುವ ವೇಳೆ ಏಕಾಏಕಿ ಮಾಜಿ ಮುಂದೆ ಬಂದ್ರೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಬಹುತೇಕರು ಕಂಗಾಲಾಗ್ತಾರೆ. ಮಾಜಿ ಪ್ರೇಮಿ, ಪ್ರೇಯಸಿ ಮುಂದೆ ಬಂದಾಗ ಏನು ಮಾಡ್ಬೇಕು ಎಂಬುದನ್ನು ಇವತ್ತು ಹೇಳ್ತೇವೆ.
ಸಾಮಾನ್ಯವಾಗಿ ಮಾಜಿ ಮುಂದೆ ಬಂದಾಗ ಮುಖಕ್ಕೆ ಹೊಡೆದಂತೆ ಎದ್ದು ಹೋಗಬಾರದು. ಇದು ಪರಿಸ್ಥಿತಿಯನ್ನು ಬಿಗಡಾಯಿಸುತ್ತದೆ. ಇದರ ಬದಲು ನಿಮ್ಮಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವಂತೆ ವರ್ತಿಸಬೇಕು. ಸಾಧ್ಯವಾದ್ರೆ ವಿಶ್ ಮಾಡಿ. ದೂರದಲ್ಲಿ ಕಂಡರೆ ಅವ್ರನ್ನು ನೋಡಿಲ್ಲವೆನ್ನುವಂತೆ ಹೋಗುವುದು ಉತ್ತಮ ಆಯ್ಕೆ.
ನಿಮ್ಮ ಸಂಗಾತಿ ಜೊತೆ ನೀವಿದ್ದಾಗ ಮಾಜಿ ನಿಮ್ಮ ಮುಂದೆ ಬಂದರೆ ಸಂಗಾತಿಗೆ ಅವರನ್ನು ಪರಿಚಯಿಸಿ. ಹಾಯ್ – ಹಲೋ ಎನ್ನುವುದು ತಪ್ಪಲ್ಲ. ಪರಿಸ್ಥಿತಿಯನ್ನು ಸಹಜವಾಗಿಡಿ. ನಿಮ್ಮ ಸಂಗಾತಿಗೆ ನಿಮ್ಮ ವರ್ತನೆ ಮೂಲಕವೇ ನೀವೆಷ್ಟು ಅವರನ್ನು ಪ್ರೀತಿಸುತ್ತೀರಿ ಎಂಬುದನ್ನು ತೋರಿಸಿ. ಇದು ಮಾಜಿ ಅರಿವಿಗೂ ಬರುತ್ತದೆ.
ವರ್ಷಗಳ ನಂತರ ನೀವಿಬ್ಬರೂ ಭೇಟಿಯಾದರೂ, ಅವರ ವೈಯಕ್ತಿಕ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಬೇಡಿ. ಹಾಗೆ ಮಾಡುವುದರಿಂದ ನೀವು ಇನ್ನೂ ಅವರ ಜೀವನದ ಬಗ್ಗೆ ಆಸಕ್ತಿ ಹೊಂದಿದ್ದೀರಿ ಎಂಬ ಅರ್ಥ ಬರುತ್ತದೆ. ಮಾತನ್ನು ಸಂಕೀರ್ಣಗೊಳಿಸಿ. ಚುಟುಕಾಗಿ ಮುಗಿಸಿ ಅಲ್ಲಿಂದ ಎದ್ದು ಹೋಗಿ.
ನಿಮ್ಮ ಸಂಗಾತಿಯೊಂದಿಗೆ ನೀವು ಊಟಕ್ಕೆ ಹೋಗಿದ್ದರೆ ಮತ್ತು ಆ ಸಮಯದಲ್ಲಿ ನೀವು ಮಾಜಿಯನ್ನು ಭೇಟಿಯಾಗಿದ್ದರೆ, ಸೌಜನ್ಯ ತೋರಿಸುವ ಆತುರದಲ್ಲಿ ಅವರನ್ನು ಊಟಕ್ಕೆ ಆಹ್ವಾನಿಸಬೇಡಿ. ಅವರು ತಮ್ಮ ಕಡೆಯಿಂದ ಈ ಆಹ್ವಾನವನ್ನು ನೀಡಿದರೆ, ಅದನ್ನು ತಿರಸ್ಕರಿಸಲು ವಿಳಂಬ ಮಾಡಬೇಡಿ. ಬದಲಿಗೆ ನಿಮ್ಮ ಸಂಗಾತಿಯೊಂದಿಗೆ ನೀವು ಭೋಜನವನ್ನು ಆನಂದಿಸಲು ಬಯಸುತ್ತೀರಿ ಎಂದು ಸ್ಪಷ್ಟಪಡಿಸಿ.
ಮಾಜಿ ಜೊತೆ ಭೌತಿಕ ದೂರವನ್ನು ಕಾಪಾಡಿಕೊಳ್ಳಿ. ಸಂಗಾತಿಯ ಕಡೆಗೆ ಹೆಚ್ಚು ಒಲವು ತೋರಿ.