ಪ್ರತಿ ನಿತ್ಯ ದೇಶದಲ್ಲಿ ಸರಗಳ್ಳತನ ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ನಿತ್ಯ ಸರಗಳ್ಳತನದ ಕಂಪ್ಲೇಂಟ್‌ಗಳು ಮಾಮೂಲಿ. ಆದರೆ ಇಲ್ಲೊಂದು ಪ್ರಕರಣ ವಿಶೇಷವಾಗಿದೆ. 8 ವರ್ಷಗಳ ಹಿಂದೆ ಕಳೆದು ಹೋಗಿದ್ದ ಚಿನ್ನದ ಸರ ಮಾಲೀಕನ ಕೈ ಸೇರಿದೆ. ಇದು ನಿಜಕ್ಕೂ ಆಶ್ಚರ್ಯವೇ ಸರಿ.
ಹೌದು, ಈ ಘಟನೆ ನಡೆದಿರೋದು ಮುಂಬೈನ ಕಲ್ಯಾಣ್‌ನಲ್ಲಿ. ಕಳೆದು ಹೋಗಿದ್ದ ಸರವನ್ನ ಹುಡುಕಿದ ಅಲ್ಲಿನ ರೈಲ್ವೇ ಪೊಲೀಸರು ಅದನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಸುಮಾರು 70 ಸಾವಿರ ರೂ. ಬೆಲೆ ಬಾಳುವ ಸರಗಳನ್ನು 2012ರಲ್ಲಿ ಸಂದೀಪ್ ಘಾಗ್ ಎಂಬುವವರು ರೈಲ್ವೇ ನಿಲ್ದಾಣದಲ್ಲಿ ಕಳೆದುಕೊಂಡಿದ್ದರು. ಅಂದೇ ಅವರು ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದರು.
ತದ ನಂತರದಲ್ಲಿ ಕಳ್ಳನನ್ನು ಪೊಲೀಸರು ಬಂಧಿಸಿದ್ದರು. ಹಾಗೆಯೇ ಸರಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಕೋರ್ಟ್‌ನಲ್ಲಿ ಈ ಸರಗಳ ಹಸ್ತಾಂತರದ ಬಗ್ಗೆ ವಿಚಾರಣೆ ಬಾಕಿ ಇತ್ತು. ಅಂದೇ ಚಿನ್ನದ ಸರದ ಮಾಲೀಕ ಇನ್ನೇನು ಸರ ಕೈ ಸೇರೋದಿಲ್ಲ ಎಂದುಕೊಂಡು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವರ ಅದೃಷ್ಟ ಕುಲಾಯಿಸಿದೆ. ಮತ್ತೆ ಚಿನ್ನದ ಸರಗಳು ಮಾಲೀಕನ ಕೈ ಸೇರಿವೆ.