ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ನಾವು ಓದಿರುತ್ತೇವೆ, ಕೇಳಿರುತ್ತೇವೆ. ಏನೂ ಅರಿಯದ ಮುಗ್ಧ ಕಂದಮ್ಮಗಳು ಕಾಮುಕರ ವಾಂಛೆಗೆ ಬಲಿಯಾಗುತ್ತವೆ. ಹೆತ್ತವರು ಮಕ್ಕಳಿಗೆ ಆರಂಭಿಕ ಹಂತದಲ್ಲಿಯೇ ಇದರ ಬಗ್ಗೆ ಅರಿವು ಮೂಡಿಸಿದರೆ ಮಕ್ಕಳ ಮೇಲಿನ ಈ ಪ್ರಕರಣವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.
ಶಾಲೆಗೆ ಹೊರಟ ಮಕ್ಕಳಿಗೆ ಅದು ಗಂಡಾಗಿರಲಿ, ಹೆಣ್ಣಾಗಿರಲಿ ಅವರಿಗೆ ಒಂದಷ್ಟು ಅರಿವು ಮೂಡಿಸಿ. ಮಕ್ಕಳಿಗೆ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶದ ಕುರಿತು ತಿಳಿ ಹೇಳಿ. ಯಾರಾದರೂ ಮಕ್ಕಳ ಖಾಸಗಿ ಭಾಗ, ಎದೆ, ಹೊಟ್ಟೆ, ಹಿಂದುಗಡೆ, ತುಟಿಯನ್ನು ಮುಟ್ಟಿದರೆ ಜೋರಾಗಿ ಕೂಗುವುದಕ್ಕೆ ಹೇಳಿ. ಇಲ್ಲವೇ ಯಾರಾದರೂ ದೊಡ್ಡವರು ಹತ್ತಿರ ಇದ್ದರೆ ಅವರ ಬಳಿ ಹೇಳುವುದಕ್ಕೆ ಹೇಳಿ.
ಶಾಲೆಯಲ್ಲಿ ನಡೆದ ಪ್ರತಿಯೊಂದು ವಿಚಾರವನ್ನು ಮಕ್ಕಳ ಬಳಿ ಕೇಳಿ. ಶಾಲೆ ಮಾತ್ರವಲ್ಲ ನಿಮ್ಮ ಪಕ್ಕದ್ಮನೆಗೆ ಮಕ್ಕಳು ಹೋಗಿದ್ದರೂ ಅಲ್ಲಿ ಯಾರಾದರೂ ಅವರನ್ನು ಸ್ಪರ್ಶಿಸಿದರೆ ಅಥವಾ ಯಾವುದಾದರೂ ಅಹಿತಕರ ಘಟನೆ ಅವರೊಂದಿಗೆ ನಡೆದರೆ ಅದರ ಬಗ್ಗೆ ವಿಚಾರಿಸಿ
ಇದನ್ನು ಯಾರೊಂದಿಗೂ ಹೇಳಬಾರದು ಎಂಬ ಭಯವನ್ನು ಅವರಲ್ಲಿ ತುಂಬಬೇಡಿ. ಅವರಲ್ಲಿ ಆತ್ಮವಿಶ್ವಾಸ ತುಂಬಿ. ಆಗ ಮಕ್ಕಳು ಪರಿಸ್ಥಿತಿಯನ್ನು ಎದುರಿಸಲು ಕಲಿಯುತ್ತಾರೆ.