ತಮ್ಮ ಮಕ್ಕಳನ್ನು ಉಳಿಸಿಕೊಳ್ಳುಲು ಅದೆಷ್ಟೋ ಜನ ಇನ್ನಿಲ್ಲದ ಕಷ್ಟ ಪಡುತ್ತಾರೆ. ತಮ್ಮ ಜೀವವನ್ನೇ ಮುಡಿಪಾಗಿಟ್ಟು ಮಕ್ಕಳನ್ನು ಕಾಪಾಡುತ್ತಾರೆ. ಇಲ್ಲೊಬ್ಬ ತಾಯಿ ಕೂಡ ತನ್ನ ಮನೆ ಮಕ್ಕಳನ್ನು ಕಾಪಾಡಲು ಸಾಹಸಕ್ಕೆ ಕೈ ಹಾಕಿದ್ದಾರೆ.
ಹೌದು, ತನ್ನ ಮಕ್ಕಳನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮಲಪ್ಪುರಂ ಮೂಲದ ಮಹಿಳೆ ಶಾಂತಿ ಎಂಬಾಕೆ ಮುಳವುಕಾಡು ಕಂಟೈನರ್ ರಸ್ತೆಯಲ್ಲಿ ಶೆಡ್ ಒಂದನ್ನು ನಿರ್ಮಿಸಿಕೊಂಡಿದ್ದಾರೆ. ಆ ಗುಡಿಸಲಿನ ಮುಂದೆ ನಾಮಫಲಕವೊಂದನ್ನು ಇಟ್ಟಿದ್ದು ಇದು ಎಲ್ಲರ ಗಮನ ಸೆಳೆಯುತ್ತಿದೆ.
ನನ್ನ ಮಕ್ಕಳಿಗೆ ಅನಾರೋಗ್ಯ ಇರೋದ್ರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಮಕ್ಕಳ ಆಸ್ಪತ್ರೆ ಬಿಲ್ ಕಟ್ಟಬೇಕಿದೆ. ಕೋವಿಡ್ ಇರೋದ್ರಿಂದ ಇದ್ದ ಕೆಲಸವೂ ಹೋಗಿದೆ. ಈಗಾಗಲೇ 20 ಲಕ್ಷ ಸಾಲ ಇದ್ದು ಅದನ್ನು ತೀರಿಸಬೇಕಾಗಿದೆ. ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿರುವುದರಿಂದ ಹೃದಯ, ಕಿಡ್ನಿ ಸೇರಿದಂತೆ ಎಲ್ಲಾ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಎರ್ನಾಕುಲಂ ಜಿಲ್ಲಾಡಳಿತ ಈಕೆಯನ್ನು ಸಮಾಧಾನಪಡಿಸಿ, ಮತ್ತೆ ಬಾಡಿಗೆ ಮನೆಗೆ ಮರಳಲು ಮನವೊಲಿಸಿದ್ದಾರೆ.