ನವದೆಹಲಿ: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಪುರಾತನ ಅನ್ನಪೂರ್ಣ ದೇವಿ ಪ್ರತಿಮೆಯನ್ನು ಕೆನಡಾದಿಂದ ವಾಪಸ್ ತರಲಾಗುತ್ತಿದೆ. ಈ ವಿಗ್ರಹವನ್ನು ಭಾರತದಿಂದ ಕಳ್ಳತನ ಮಾಡಿ ಹೊತ್ತೊಯ್ಯಲಾಗಿತ್ತು. ಇದೀಗ ಪುರಾತನ ವಿಗ್ರಹವನ್ನು ಮರಳಿ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
71ನೇ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 1913ರಲ್ಲಿ ಉತ್ತರ ಪ್ರದೇಶದ ವಾರಾಣಸಿಯಿಂದ ಕದ್ದೊಯ್ಯಲಾಗಿದ್ದ ಅನ್ನಪೂರ್ಣದೇವಿ ಪ್ರತಿಮೆಯನ್ನು ಭಾರತಕ್ಕೆ ವಾಪಸ್ ತರಲಾಗುತ್ತಿದೆ ಎಂಬುದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯ. ನಮ್ಮ ಪುರಾತನ ವಿಗ್ರಹಗಳನ್ನು ಕದ್ದೊಯ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಈಗ ಅಂತಹ ವಿಗ್ರಹಗಳನ್ನು ವಾಪಸ್ ತರಲಾಗುತ್ತಿದೆ ಎಂದರು.
ನ್ಯೂಜಿಲ್ಯಾಂಡ್ ನಲ್ಲಿ ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ. ಗೌರವ್ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾರತೀಯ ಸಂಸ್ಕೃತಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದೆ. ಬ್ರೆಜಿಲ್ ನಲ್ಲಿ ವೇದ-ಉಪನಿಷತ್ ಗಳ ಉಪನ್ಯಾಸ ನೀಡಲಾಗುತ್ತಿದೆ. ಇದು ನಮ್ಮ ಸಂಸ್ಕೃತಿಯ ಗೌರವ ಹೆಚ್ಚಿಸಿದೆ ಎಂದು ಹೇಳಿದರು.