ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಘರ್ಷಣೆ ನಡೆಸಿದ ಪರಿಣಾಮ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕವೂ ಒಂದು ಕಡೆ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಲೇ ಮತ್ತೊಂದು ಕಡೆ ಚೀನಾ ತನ್ನ ಕುತಂತ್ರ ಬುದ್ಧಿಯನ್ನು ಮುಂದುವರಿಸಿತ್ತು.
ಭಾರತದ ವಿರುದ್ಧ ನೆರೆ ರಾಷ್ಟ್ರ ನೇಪಾಳವನ್ನು ಎತ್ತಿ ಕಟ್ಟಿದ್ದ ಚೀನಾ, ಆ ಮೂಲಕ ಭಾರತಕ್ಕೆ ಇರುಸುಮುರುಸು ಉಂಟು ಮಾಡಲು ಮುಂದಾಗಿತ್ತು. ಆದರೆ ಈ ಪ್ರಯತ್ನಕ್ಕೆ ಮುಂದಾದ ಚೀನಾ ಈಗ ಇಂಗು ತಿಂದ ಮಂಗನಂತಾಗಿದೆ. ಚೀನಾದ ತಾಳಕ್ಕೆ ತಕ್ಕಂತೆ ಕುಣಿದು ಭಾರತದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಈಗ ಸ್ವತಃ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಇದರ ಜೊತೆಗೆ ಭಾರತ ಸರ್ಕಾರ, ಚೀನಾ ಮೂಲದ 49 ಆಪ್ ಗಳನ್ನು ನಿಷೇಧ ಮಾಡಿದ್ದು, ಆರ್ಥಿಕವಾಗಿ ಚೀನಾಗೆ ಹೊಡೆತ ನೀಡಲು ಸಫಲವಾಗಿದೆ. ಜೊತೆಗೆ ಭಾರತದಲ್ಲಿ ಬೃಹತ್ ಕಾಮಗಾರಿ ನಡೆಸುವ ಸಲುವಾಗಿ ಟೆಂಡರ್ ಹಾಕಲು ಮುಂದಾಗಿದ್ದ ಚೀನಾ ಕಂಪನಿಗಳಿಗೆ ಬ್ರೇಕ್ ಹಾಕಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಚೀನಾ ಸದ್ಯಕ್ಕೆ ತಣ್ಣಗಾದಂತೆ ತೋರುತ್ತಿದ್ದರೂ ಮುಂದಿನ ದಿನಗಳಲ್ಲಿ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸುವ ಸಾಧ್ಯತೆ ಇದೆ. ಹೀಗಾಗಿಯೇ ಕೇಂದ್ರ ಸರ್ಕಾರ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ.