ಮಿನಿ ಸ್ವಿಟ್ಚರ್ಲೆಂಡ್ ಆಫ್ ಇಂಡಿಯಾ ಎಂದೇ ಕರೆಯಿಸಿಕೊಳ್ಳುವ ಖಜ್ಜಿಯಾರ್ ಡಾಲ್ ಹೌಸಿ ಬಳಿ ಇರುವ ಈ ಸಣ್ಣ ಪಟ್ಟಣದಲ್ಲಿ ಕಣ್ಣಿನ ನೋಟಕ್ಕೆ ಮುದ ನೀಡುವ ಎಲ್ಲವೂ ಇದೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಗಿರಿಧಾಮ ಇದಾಗಿದ್ದು ಡಾಲ್ ಹೌಸಿಯಿಂದ 24 ಕಿಮೀ ದೂರದಲ್ಲಿದೆ.
ಇಲ್ಲಿ ಸರೋವರವಿದೆ, ಹುಲ್ಲುಗಾವಲುಗಳಿವೆ, ಕಾಡು ಇದೆ, ಬೆಟ್ಟಗಳಿವೆ, ಇದು ಅಭಯಾರಣ್ಯದ ಭಾಗವಾಗಿದೆ. 6500 ಅಡಿಗಳಷ್ಟು ಎತ್ತರದಲ್ಲಿರುವ ಇಲ್ಲಿನ ಭೂದೃಶ್ಯ ಪ್ರಕೃತಿ ಪ್ರೇಮಿಗಳನ್ನು ರಂಜಿಸುತ್ತದೆ. ಖಜ್ಜಿಯಾರ್ ಒಂಬತ್ತು ರಂಧ್ರಗಳ ಗಾಲ್ಫ್ ಕೋರ್ಸ್ ಗೆ ಹೆಸರುವಾಸಿಯಾಗಿದೆ.
ಸಾಹಸ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸುವ ಈ ತಾಣದಲ್ಲಿ ಪ್ಯಾರಾಗ್ಲೈಡಿಂಗ್, ಕುದುರೆ ಸವಾರಿ, ಜೋರ್ಬಿಂಗ್, ಚಾರಣ ಮೊದಲಾದ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸುತ್ತದೆ. ಭಾರೀ ಹಿಮಾಪಾತವಾದಾಗ ಕೆಲವೊಮ್ಮೆ ಇಲ್ಲಿಗೆ ಹೋಗುವ ಮಾರ್ಗವನ್ನು ಮುಚ್ಚಬಹುದು.
ಇಲ್ಲಿರುವ ಹಸಿರು ಹುಲ್ಲುಗಾವಲು ತಟ್ಟೆ ಆಕಾರದಲ್ಲಿದ್ದು ದೇವದಾರ್ ಮರಗಳಿಂದ ಆವೃತವಾಗಿದೆ. ಇದರ ಮಧ್ಯೆ ಒಂದು ಸರೋವರವಿದ್ದು ಇದು ಸ್ವಿಜ್ಚರ್ಲೆಂಡ್ ನ ಸೌಂದರ್ಯವನ್ನು ಹೋಲುತ್ತದೆ. ಜನವರಿ, ಫೆಬ್ರವರಿ ಹೊರತಾಗಿ ಉಳಿದಂತೆ ಎಲ್ಲಾ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು.