ಹಿಂದಿನ ತಿಂಗಳು ಪಬ್ಜಿ ಪ್ರೇಮಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಪಬ್ಜಿ ಮೊಬೈಲ್ ಹಾಗೂ ಪಬ್ಜಿ ಮೊಬೈಲ್ ಲೈಟ್ ಬಂದ್ ಮಾಡಿತ್ತು. ಈಗಾಗಲೇ ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡಿದ್ದವರು ಆರಾಮವಾಗಿ ಅದನ್ನು ಬಳಕೆ ಮಾಡ್ತಿದ್ದರು. ಆದ್ರೆ ಇಂದಿನಿಂದ ಅವ್ರಿಗೂ ಶಾಕ್ ಆಗಿದೆ. ಈಗಾಗಲೇ ಡೌನ್ಲೋಡ್ ಆಗಿದ್ದ ಅಪ್ಲಿಕೇಷನ್ ಕೂಡ ಇಂದಿನಿಂದ ಕೆಲಸ ನಿಲ್ಲಿಸಲಿದೆ.
ಪಬ್ಜಿ ಇಂಡಿಯಾ, ತನ್ನ ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಪ್ರಿಯ ಅಭಿಮಾನಿಗಳೇ, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಧ್ಯಂತರ ಆದೇಶದ ನಂತರ, ಅಕ್ಟೋಬರ್ 30ರಿಂದ ಎಲ್ಲಾ ಸೇವೆಗಳನ್ನು ಬಂದ್ ಮಾಡುತ್ತಿದ್ದೇವೆ. ಬಳಕೆದಾರರ ಡೇಟಾ ಸುರಕ್ಷತೆ ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿದೆ. ಭಾರತದ ಸುರಕ್ಷತಾ ಕಾನೂನನ್ನು ನಾವು ಪಾಲಿಸಿದ್ದೇವೆ. ಇಲ್ಲಿಂದ ಹೊರಹೋಗಲು ತುಂಬಾ ವಿಷಾದಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಲಾಗಿದೆ.
ಭಾರತದಲ್ಲಿ, ಪಬ್ಜಿ ಮೊಬೈಲ್ ಮತ್ತು ಪಬ್ಜಿ ಮೊಬೈಲ್ ಲೈಟ್ ನಿಷೇಧದಿಂದಾಗಿ ಟೆನ್ಸೆಂಟ್ ಗೆ 2.48 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. 2018 ರಲ್ಲಿ ಭಾರತದಲ್ಲಿ ಪಬ್ಜಿ ಪ್ರಾರಂಭವಾಗಿತ್ತು. ಇದು ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿತ್ತು. ವಿಶ್ವದ ಒಟ್ಟು ಬಳಕೆದಾರರಲ್ಲಿ ಭಾರತದ ಸಂಖ್ಯೆ ಶೇಕಡಾ 24 ರಷ್ಟಿದೆ.