
ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಮಹಾಮಾರಿ ಕೊರೊನಾ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ರೋಗಕ್ಕೆ ವಿಶ್ವದಾದ್ಯಂತ ಈಗಾಗಲೇ 4.98 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 99 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ.
ಭಾರತದಲ್ಲೂ ಕೊರೊನಾ ಅಬ್ಬರಿಸುತ್ತಿದ್ದು, ಈಗಾಗಲೇ 16 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 5 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿವೆ.
ಇದರ ಮಧ್ಯೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ, ಕೊರೊನಾ ನಿಯಂತ್ರಣದಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದಿದ್ದಾರೆ. ಲಾಕ್ಡೌನ್, ಕಠಿಣ ನಿಯಮ ಹಾಗೂ ಜನರ ಸಹಕಾರದಿಂದಾಗಿ ಸೋಂಕು ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.