ಇಷ್ಟು ದಿನ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿತ್ತು. ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರಲಿದೆ. ಸ್ಥಳೀಯ ಹೆಲ್ಮೆಟ್ ಧರಿಸಿದ್ರೆ ದಂಡ ಬೀಳಲಿದೆ.
ಸ್ಥಳೀಯ ಹೆಲ್ಮೆಟ್ ಧರಿಸಿದ್ರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಹೆಲ್ಮೆಟ್ ಉತ್ಪಾದನೆ ಮಾಡಿದವರಿಗೆ ಎರಡು ಲಕ್ಷ ರೂಪಾಯಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು. ಲೋಕಲ್ ಹೆಲ್ಮೆಟ್ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆಯಿಂದ ಪ್ರತಿದಿನ ಸಾಕಷ್ಟು ಬೈಕ್ ಸವಾರರು ಸಾವನ್ನಪ್ಪುತ್ತಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬೈಕ್ ಸವಾರರಿಗೆ ಸುರಕ್ಷಿತ ಹೆಲ್ಮೆಟ್ ಒದಗಿಸಲು ಮೊದಲ ಬಾರಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪಟ್ಟಿಯಲ್ಲಿ ಇದನ್ನು ಸೇರಿಸಿದೆ. ಜುಲೈ 30 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸಚಿವಾಲಯವು, ಮಧ್ಯಸ್ಥಗಾರರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಕೋರಿದೆ.
ಹೊಸ ನಿಯಮವನ್ನು 30 ದಿನಗಳ ನಂತರ ಜಾರಿಗೆ ತರಲಾಗುವುದು. ಇದರ ಅಡಿಯಲ್ಲಿ ತಯಾರಕರು ಹೆಲ್ಮೆಟ್ ಅನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೊದಲು ಬಿಎಸ್ಐನಿಂದ ಪ್ರಮಾಣೀಕರಿಸಬೇಕು. ಹೆಲ್ಮೆಟ್ ಧರಿಸದೆ ಅಥವಾ ಕಳಪೆ ಹೆಲ್ಮಟ್ ಧರಿಸಿದ ವಾಹನ ಸವಾರರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಹೊಸ ಮಾನದಂಡದಲ್ಲಿ, ಹೆಲ್ಮೆಟ್‌ನ ತೂಕವನ್ನು ಒಂದೂವರೆ ಕೆಜಿಯಿಂದ ಒಂದು ಕೆಜಿ 200 ಗ್ರಾಂಗೆ ಇಳಿಸಲಾಗಿದೆ. ಬಿಐಎಸ್ ಪಟ್ಟಿಯಲ್ಲಿ ಹೆಲ್ಮೆಟ್ ಸೇರಿಸುವುದರಿಂದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಚಾಲಕರ ಸಾವು ಕಡಿಮೆಯಾಗಲಿದೆ ಎಂದು ಹೆಲ್ಮೆಟ್ ತಯಾರಕರ ಸಂಘದ ಅಧ್ಯಕ್ಷ ರಾಜೀವ್ ಕಪೂರ್ ಹೇಳಿದ್ದಾರೆ.