
ಕೊರೊನಾ ಬಿಕ್ಕಟ್ಟಿನ ಮಧ್ಯೆ 7 ತಿಂಗಳ ನಂತ್ರ ಚಲನಚಿತ್ರ ಮಂದಿರಗಳ ಬಾಗಿಲು ತೆರೆದಿದೆ. ಕೊರೊನಾ ಮಾರ್ಗಸೂಚಿಯನ್ನು ಎಲ್ಲ ಥಿಯೇಟರ್ ನಲ್ಲಿ ಪಾಲನೆ ಮಾಡಲಾಗ್ತಿದೆ. ಸ್ವಚ್ಛತೆ, ಸ್ಯಾನಿಟೈಜರ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಥಿಯೇಟರ್ ಗೆ ಬರ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಅವ್ರನ್ನು ಸೆಳೆಯಲು ಚಿತ್ರಮಂದಿರದ ಮಾಲೀಕರು ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಐನಾಕ್ಸ್ ಹೊಸ ಆಫರ್ ಘೋಷಣೆ ಮಾಡಿದೆ.
ಐನಾಕ್ಸ್ ಮೂವೀಸ್ ಖಾಸಗಿ ಸ್ಕ್ರೀನಿಂಗ್ ಶುರು ಮಾಡಿದೆ. ಗ್ರಾಹಕರು ಖಾಸಗಿಯಾಗಿ ಇಡೀ ಚಿತ್ರಮಂದಿರವನ್ನು ಕಾಯ್ದಿರಿಸಬಹುದು. ಥಿಯೇಟರ್ ಕೇವಲ 2999 ರೂಪಾಯಿಗಳಿಗೆ ಕಾಯ್ದಿರಿಸಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚಿತ್ರವನ್ನು ವೀಕ್ಷಿಸಬಹುದು. ಕನಿಷ್ಠ ಇಬ್ಬರು ಥಿಯೇಟರ್ ನಲ್ಲಿರುವುದು ಅವಶ್ಯಕ. ಗರಿಷ್ಠ ಸಂಖ್ಯೆಯು ಥಿಯೇಟರ್‌ನ ಪೂರ್ಣ ಸಾಮರ್ಥ್ಯದ ಶೇಕಡಾ 50ರಷ್ಟಿರಬೇಕು.
ಇದ್ರಲ್ಲಿ ವಿಶೇಷವೆಂದ್ರೆ ಗ್ರಾಹಕರೇ ದಿನಾಂಕ ಹಾಗೂ ಸಮಯವನ್ನು ನಿಗದಿ ಮಾಡಬಹುದು. ಹಾಗೆ ಹೊಸದಾಗಿ ಬಿಡುಗಡೆಯಾದ ಸಿನಿಮಾ ಅಥವಾ ಹಳೆ ಸಿನಿಮಾಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಬಹುದು. ಪ್ರೇಕ್ಷಕರು ಯಾವುದೇ ಭಯವಿಲ್ಲದೆ ಆರಾಮವಾಗಿ ಚಿತ್ರ ವೀಕ್ಷಣೆ ಮಾಡಬಹುದು. ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗುವುದು ಎಂದು ಐನಾಕ್ಸ್ ಹೇಳಿದೆ.