ನಕಲಿ ಬಿಲ್ಗಳನ್ನ ಸಿದ್ಧಪಡಿಸುತ್ತಿದ್ದ ಎಂಟ್ರಿ ಆಪರೇಟರ್ ಗಳ ವಿರುದ್ಧದ ಬಹು ನಗರ ತೆರಿಗೆ ವಂಚನೆ ಕಾರ್ಯಾಚರಣೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ಕನಿಷ್ಟ ಅಂದ್ರೂ 62 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದೆ ಅಂತಾ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಸಂಜಯ್ ಜೈನ್ ಎಂಬ ವ್ಯಕ್ತಿಗೆ ಸೇರಿದ ಹಣವಿದು ಅಂತಾ ಹೇಳಲಾಗಿದೆ. ದೆಹಲಿ, ಹರಿಯಾಣ, ಪಂಜಾಬ್, ಉತ್ತರಾಖಂಡ್ ಹಾಗೂ ಗೋವಾದ 42 ಕಡೆಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಈ ಹಣವನ್ನ ವಶಪಡಿಸಿಕೊಳ್ಳಲಾಗಿದೆ.
ಮರದ ಕಪಾಟು ಹಾಗೂ ಪೀಠೋಪಕರಣಗಳಲ್ಲಿ ಹೊಸ 500 ಹಾಗೂ 2000 ರೂಪಾಯಿ ನೋಟುಗಳು ಪತ್ತೆಯಾಗಿವೆ ಅಂತಾ ಮೂಲಗಳು ತಿಳಿಸಿವೆ.
ನಕಲಿ ಬಿಲ್ಗಳನ್ನ ಸೃಷ್ಟಿಸಿ ಹಣ ಮಾಡುವ ಈ ಹವಾಲಾ ದಂಧೆಯ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿಯಲ್ಲಿ 2.37 ಕೋಟಿ ನಗದು, 2.89 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 17 ಬ್ಯಾಂಕ್ ಲಾಕರ್ಗಳು ಪತ್ತೆಯಾಗಿದ್ದು ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆ ಅಂತಾ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೋಟು ಅಮಾನ್ಯೀಕರಣದ ಬಳಿಕ ನಡೆದ ದಾಳಿಗಳಲ್ಲಿ ವಶಪಡಿಸಿಕೊಂಡ ಅತೀ ದೊಡ್ಡ ಮೊತ್ತದ ಹಣ ಇದಾಗಿದೆ.