ಭಾರತೀಯ ವಾಯುಪಡೆಗೆ ಬುಧವಾರದಂದು 5 ರಫೇಲ್ ಯುದ್ಧವಿಮಾನಗಳು ಸೇರ್ಪಡೆಗೊಂಡಿದ್ದು, ಇದರಿಂದಾಗಿ ಭಾರತೀಯ ಸೇನೆಯ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಚೀನಾ ಹಾಗೂ ಪಾಕಿಸ್ತಾನವನ್ನು ಕಂಗೆಡಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
ಫ್ರಾನ್ಸಿನಿಂದ 8500 ಕಿಲೋಮೀಟರ್ ಅಂತರ ಕ್ರಮಿಸಿ ಭಾರತದ ಅಂಬಾಲದಲ್ಲಿರುವ ವಾಯುನೆಲೆಗೆ ಬುಧವಾರ ಮಧ್ಯಾಹ್ನ 3.15 ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಲೆ ವಿಶೇಷ ಜಲ ಫಿರಂಗಿ ಮೂಲಕ ಸ್ವಾಗತ ಕೋರಲಾಗಿದೆ.
ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ ನಿಂದ ಹಾರಿಸಿಕೊಂಡು ಬಂದ ಪೈಲೆಟ್ ಗಳ ಪೈಕಿ ಬಿಹಾರ ಮೂಲದ ಅರುಣ್ ಕುಮಾರ್ ಒಬ್ಬರಾಗಿದ್ದು, ಇವರು ಕರ್ನಾಟಕದ ವಿಜಯಪುರದೊಂದಿಗೆ ನಂಟು ಹೊಂದಿರುವುದು ವಿಶೇಷ.
ಅರುಣಕುಮಾರ್ ಪ್ರಸ್ತುತ ಭಾರತೀಯ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದು, ಇವರು 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾನ್ವಿತರಾಗಿದ್ದ ಅರುಣಕುಮಾರ್ ಈಗ ದೇಶದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ್ದಾರೆ.