ಸಾಮಾಜಿಕ ಜಾಲತಾಣಗಳು ವಿಶ್ವದ ಯಾವುದೇ ಮೂಲೆಯಲ್ಲಿದ್ದವರೂ ಕೂಡ ಪರಿಚಿತರಾಗುವಂತೆ ಮಾಡುತ್ತದೆ. ಬಹಳಷ್ಟು ಮಂದಿಯ ಮುಖತಃ ದರ್ಶನ ಸಾಧ್ಯವಾಗದಿದ್ದರೂ ಸಹ ಸಂವಹನ ಸಾಧಿಸಲು ಸಾಮಾಜಿಕ ಜಾಲತಾಣಗಳು ಅನುಕೂಲ ಕಲ್ಪಿಸಿಕೊಡುತ್ತದೆ.
ಈ ರೀತಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯ ಪ್ರೀತಿಗೆ ಬಿದ್ದ ಯುವಕನೊಬ್ಬ ಆಕೆಯನ್ನು ಭೇಟಿ ಮಾಡುವ ಸಲುವಾಗಿ ಹುಚ್ಚು ಸಾಹಸ ಮಾಡಿದ್ದು, ಇದೀಗ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಜೀಶಾನ್ ಎಂಬಾತನಿಗೆ ಫೇಸ್ಬುಕ್ನಲ್ಲಿ ಪಾಕಿಸ್ತಾನದ ಯುವತಿಯೊಂದಿಗೆ ಪರಿಚಯವಾಗಿದೆ. ಹೀಗಾಗಿ ಆಕೆಯನ್ನು ಭೇಟಿ ಮಾಡಲು ಮುಂದಾದ ಈತ ಬೈಕಿನಲ್ಲಿ ಗುಜರಾತಿಗೆ ಬಂದಿದ್ದು, ಕಚ್ ಮರಳುಗಾಡಿನಲ್ಲಿ ಆತನ ಬೈಕು ಸಿಲುಕಿಕೊಂಡಿದೆ.
ಬೈಕನ್ನು ಅಲ್ಲಿಯೇ ಬಿಟ್ಟ ಆತ ಕಾಲ್ನಡಿಗೆಯಲ್ಲೇ ಪಾಕಿಸ್ತಾನದ ಗಡಿ ಪ್ರವೇಶಿಸಲು ಮುಂದಾಗಿದ್ದಾನೆ. ಆದರೆ ಅನಾಥವಾಗಿ ಬಿದ್ದಿದ್ದ ಬೈಕ್ ನೋಡಿದ್ದ ಪೊಲೀಸರು ಗಡಿಯಲ್ಲಿನ ಎಲ್ಲ ಚೆಕ್ ಪೋಸ್ಟ್ ಗಳಿಗೆ ಎಚ್ಚರಿಕೆ ರವಾನಿಸಿದ್ದು, ಈ ವೇಳೆ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಆತನ ವಿಚಾರಣೆ ನಡೆಸಲಾಗುತ್ತಿದೆ.