ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ ಕ್ರಮೇಣ ಮನಾಲಿ ಎಂಬ ಹೆಸರು ಪಡೆಯಿತು ಎನ್ನುವವರಿದ್ದಾರೆ. ಅದಕ್ಕೆ ಸರಿಯಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೂ ಇದೆ. ಮನಾಲಿ ಕಣಿವೆಯನ್ನು ದೇವರ ಕಣಿವೆ ಎಂದೂ ಕರೆಯುತ್ತಾರೆ.
ಸದ್ಯ ಇದು ಹನಿಮೂನ್ ಸ್ಪಾಟ್. ಮಧುಚಂದ್ರದ ಸ್ಮರಣೀಯ ರೋಮಾಂಚಕ ಕ್ಷಣಗಳಿಗಾಗಿ ದಂಪತಿಗಳಿಗೆಂದೇ ವಿಶೇಷ ಪ್ಯಾಕೇಜ್ ಗಳಿವೆ. ಇಲ್ಲಿ ಸಾಕಷ್ಟು ಸಂಖ್ಯೆಯ ಹೋಟೆಲ್ ಮತ್ತು ರೆಸಾರ್ಟ್ ಗಳಿವೆ.
ವರ್ಷಪೂರ್ತಿ ಆಕರ್ಷಣೆಯನ್ನು ಉಳಿಸಿಕೊಳ್ಳುವುದು ಈ ತಾಣದ ವೈಶಿಷ್ಟ್ಯ. ಇಲ್ಲಿರುವ ಆಹ್ಲಾದಕರ ಹವಾಮಾನ ಮತ್ತು ಹಿಮದ ರೋಮಾಂಚನ ಅನುಭವ ಪ್ರವಾಸಿಗರನ್ನು ಮತ್ತೆ ಮತ್ತೆ ಇತ್ತ ಕರೆಯುತ್ತದೆ.
ಕುಟುಂಬದೊಂದಿಗೆ ಬಂದರೂ ಇಲ್ಲಿ ವೀಕ್ಷಿಸಲು ಹಲವು ತಾಣಗಳಿವೆ. ದೇವಾಲಯ ಮತ್ತು ಪೌರಾಣಿಕ ಸ್ಥಳವಿದೆ. ಮಣಿಕರಣ್ ಸಾಹಿಬ್ ಗುರುದ್ವಾರವಿದೆ. ಬಿಸಿ ನೀರಿನ ಬುಗ್ಗೆಯಿದೆ. ಸೇಬು ಹಣ್ಣಿನ ತೋಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಕುಲು, ಸೋಲಾಂಗ್ ಮತ್ತು ರೋಹ್ವಾಂಗ್ ಪಾಸ್ ಕಣಿವೆಗಳು ಇಲ್ಲಿಗೆ ಭೇಟಿ ನೀಡುವವರ ಸಂತಸವನ್ನು ಹೆಚ್ಚಿಸುತ್ತವೆ.