
ಜನಸಾಮಾನ್ಯರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ತಾನೇ ಇದೆ. ಈಗಾಗ್ಲೇ ಅಡುಗೆ ಎಣ್ಣೆ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಇಂದಿನಿಂದ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ. 2021ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ದೇಸೀ LPG ಸಿಲಿಂಡರ್ ದರ ಏರಿಕೆಯಾಗಿದೆ.
ಬೆಲೆ ಏರಿಕೆ ಬಳಿಕ ಬೆಂಗಳೂರಲ್ಲಿ ಎಲ್ ಪಿ ಜಿ ಸಿಲಿಂಡರ್ ದರ 902 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ದರ 949.50 ಪೈಸೆ ಆಗಿದೆ. ಕೋಲ್ಕತ್ತಾದಲ್ಲಿ 976 ರೂಪಾಯಿ ಹಾಗೂ ಚೆನ್ನೈನಲ್ಲಿ ಗೃಹಬಳಕೆ ಸಿಲಿಂಡರ್ ದರ 915 ರೂಪಾಯಿ 50 ಪೈಸೆಯಿಂದ 965 ರೂಪಾಯಿ 50 ಪೈಸೆಗೆ ಏರಿಕೆಯಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 938 ರೂಪಾಯಿಯಿಂದ 987 ರೂಪಾಯಿಗೆ ಏರಿಕೆಯಾಗಿದೆ.
ಬಿಹಾರದ ಪಾಟ್ನಾದಲ್ಲಿ ಸಿಲಿಂಡರ್ ಅತ್ಯಂತ ದುಬಾರಿಯಾಗಿದ್ದು, ನೀವು 1039 ರೂಪಾಯಿ 50 ಪೈಸೆ ಪಾವತಿಸಬೇಕು. ಡೀಸೆಲ್-ಪೆಟ್ರೋಲ್ ಬೆಲೆ ಕೂಡ ಬಹಳ ಸಮಯದ ನಂತರ ಮತ್ತೊಮ್ಮೆ ಏರಿಕೆಯಾಗಿದೆ. ತೈಲ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆಯಾಗಿದ್ದು ಇಂದಿನಿಂದ್ಲೇ ನವೀಕೃತ ದರ ಜಾರಿಗೆ ಬರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಚ್ಚಾ ತೈಲ ದುಬಾರಿಯಾಗಿರುವುದೇ ಕಾರಣ. ಮೊದಲು ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 80 ಡಾಲರ್ ಇತ್ತು, ಈಗ 100 ಡಾಲರ್ ಗೆ ತಲುಪಿದೆ.