ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ಪಿಂಚಣಿ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕುಗಳ ವಿಲೀನದ ಬಳಿಕ ಮಾರ್ಚ್ ತಿಂಗಳಿನಲ್ಲಿ ಈ ಕುರಿತು ಆದೇಶ ಹೊರಡಿಸಲಾಗಿತ್ತಾದರೂ ಲಾಕ್ಡೌನ್ ಮತ್ತಿತರ ಕಾರಣಗಳಿಂದ ಇದರ ಅರಿವು ಬಹುತೇಕರಿಗೆ ಇರಲಿಲ್ಲ.
ಕೆಲ ನಿವೃತ್ತ ಸರ್ಕಾರಿ ನೌಕರರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿಲ್ಲದ ಕಾರಣ ಅವರ ಆಗಸ್ಟ್ ತಿಂಗಳಿನ ಪಿಂಚಣಿ ಹಣ ಇನ್ನೂ ಖಾತೆಗೆ ಜಮಾ ಆಗಿಲ್ಲವೆಂದು ಹೇಳಲಾಗಿದೆ. ಆಗಸ್ಟ್ ಅಂತ್ಯದವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಮಾಡಿಸುವಂತೆ ಸೂಚನೆ ನೀಡಲಾಗಿತ್ತಾದರೂ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ.
ಆದರೆ ಬಹಳಷ್ಟು ಸರ್ಕಾರಿ ನೌಕರರು ತಾವು ನಿವೃತ್ತರಾದ ಬಳಿಕ ಬ್ಯಾಂಕ್ ಖಾತೆ ಹೊಂದಿದ್ದ ಊರನ್ನು ತೊರೆದು ಬೇರೆ ಊರುಗಳಲ್ಲಿ ನೆಲೆಸಿದ್ದು, ಇದೀಗ ಆ ಖಾತೆಯನ್ನು ರದ್ದುಪಡಿಸಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆಯಲು ಕೊರೊನಾ ಅಡ್ಡಿಯಾಗಿದೆ. ಆದರೆ ವಿಳಂಬವಾದರೂ ಸಹ ಬಾಕಿ ಉಳಿಯುವ ಪಿಂಚಣಿ ಹಣ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆದು ಮಾಹಿತಿ ನೀಡಿದ ಬಳಿಕ ಜಮೆಯಾಗುತ್ತದೆ ಎಂದು ಹೇಳಲಾಗಿದೆ.