ಕ್ಯಾಬ್ನಲ್ಲಿ ಪ್ರಯಾಣಿಕರನ್ನು ಕೂರಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ಓಲಾ ಚಾಲಕನೊಬ್ಬ ಕುಟುಂಬದವರ ಎದುರಲ್ಲೇ 34 ವರ್ಷದ ಟೆಕ್ಕಿಯನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಮತ್ತು ಮಕ್ಕಳ ಎದುರಲ್ಲೇ ಥಳಿಸಿ ಕೊಂದು ಹಾಕಿದ್ದಾನೆ. ಚೆನ್ನೈನ ಹಳೆ ಮಹಾಬಲಿಪುರಂ ರಸ್ತೆಯಲ್ಲಿ ಈ ಕೃತ್ಯ ನಡೆದಿದೆ.
ಗುಡುವಂಚೇರಿಯ ಎಚ್.ಉಮೇಂದರ್ ಎಂಬಾತ ತನ್ನ ಪತ್ನಿ ಭವ್ಯ, ಇಬ್ಬರು ಮಕ್ಕಳು ಮತ್ತು ಭವ್ಯಾಳ ಸಹೋದರಿ ಮತ್ತವಳ ಇಬ್ಬರು ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿದ್ದ. ಎಲ್ಲರೂ ಒಟ್ಟಾಗಿ ಸಿನೆಮಾ ವೀಕ್ಷಿಸಿಕೊಂಡು ನವಲೂರಿನ ಮಾಲ್ನಿಂದ ಮಧ್ಯಾಹ್ನ 3.30ರ ಸುಮಾರಿಗೆ ಹೊರಬಿದ್ದಿದ್ದಾರೆ. ಭವ್ಯ ಓಲಾ ಕ್ಯಾಬ್ ಬುಕ್ ಮಾಡಿದ್ದು, ಕ್ಯಾಬ್ ಬರ್ತಿದ್ದಂತೆ ಎಲ್ಲರೂ ಅದರೊಳಕ್ಕೆ ಹತ್ತಿ ಕುಳಿತಿದ್ದಾರೆ.
ತನ್ನ ಅನುಮತಿಯಿಲ್ಲದೆ ಮನೆಯವರು ವಾಹನ ಏರಿದ್ದಾರೆ ಅಂತಾ ಓಲಾ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ. ಓಟಿಪಿ ದೃಢಪಡಿಸಿದ ಬಳಿಕ ಕಾರು ಏರಿ ಅಂತಾ ಎಲ್ಲರನ್ನೂ ಕೆಳಕ್ಕಿಳಿಸಿದ್ದಾನೆ. ಚಾಲಕ ರವಿಯ ವರ್ತನೆಯಿಂದ ಕೆರಳಿದ ಉಮೇಂದರ್, ಕಾರಿನ ಬಾಗಿಲನ್ನು ಜೋರಾಗಿ ಹಾಕಿ ತಮ್ಮ ಕೋಪ ಪ್ರದರ್ಶಿಸಿದ್ದಾರೆ. ನಿಯಮದ ಪ್ರಕಾರ ಕ್ಯಾಬ್ನಲ್ಲಿ ನಾಲ್ವರೇ ಕೂರಬೇಕು, ನೀವು ಏಳು ಜನರಿದ್ದೀರಾ, ಎಸ್ಯುವಿ ಬುಕ್ ಮಾಡಬೇಕಿತ್ತು ಅಂತಾ ಓಲಾ ಚಾಲಕ ಜಗಳ ಶುರುಮಾಡಿದ್ದಾನೆ.
ಇದೇ ವಿಚಾರಕ್ಕೆ ರವಿ ಮತ್ತು ಉಮೇಂದರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ತನ್ನ ಕೈಯ್ಯಲ್ಲಿದ್ದ ಫೋನ್ನಿಂದ ರವಿ, ಉಮೇಂದರ್ ತಲೆಗೆ ಹೊಡೆದಿದ್ದಾನೆ. ಪ್ರಜ್ಞೆತಪ್ಪಿ ಬಿದ್ದ ಉಮೇಂದರ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಉಮೇಂದರ್ನನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.
ಟೆಕ್ಕಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದು ಹಾಕಿದ್ದ ಸೇಲಂ ಮೂಲದ ಚಾಲಕ ರವಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆದ್ರೆ ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿದ್ದ ಟೆಕ್ಕಿ ಉಮೇಂದರ್, ವಾರಾಂತ್ಯವನ್ನು ಕುಟುಂಬದೊಂದಿಗೆ ಕಳೆಯಲು ಶನಿವಾರ ಗುಡುವಂಚೇರಿಗೆ ಬಂದಿದ್ದ.