ಕರ್ವಾ ಚೌತ್ ದಿನ ಪತಿಯ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಪತ್ನಿಯಾದವಳು ವೃತ ಮಾಡ್ತಾಳೆ. ಆದ್ರೆ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ಪತಿ ಆಯಸ್ಸು ವೃದ್ಧಿಗೆ ಪ್ರಾರ್ಥಿಸುವ ಬದಲು ಪತಿಯನ್ನು ಯಮಲೋಕಕ್ಕೆ ಕಳುಹಿಸಿದ್ದಾಳೆ. ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿ ಮೇಲೆ ಸೀಮೆ ಎಣ್ಣೆ ಸುರಿದು ಪತ್ನಿ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ.
ಘಟನೆ ಬೋರ್ಡಾಬ್ರಾ ಗ್ರಾಮದಲ್ಲಿ ನಡೆದಿದೆ. ಮಧ್ಯಾಹ್ನ 1.30 ರ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಗಂಡನನ್ನು ಜೀವಂತವಾಗಿ ಸುಟ್ಟಿದ್ದಾಳೆ. ಅಕ್ಕಪಕ್ಕದವರು ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರ ಮದುವೆಯಾಗಿ 8 ವರ್ಷ ಕಳೆದಿತ್ತು. ಆದ್ರೆ ದಂಪತಿಗೆ ಮಗುವಾಗಿರಲಿಲ್ಲ. ಇದೇ ವಿವಾದಕ್ಕೆ ಮುಖ್ಯ ಕಾರಣವಾಗಿತ್ತು. ಮಕ್ಕಳಿಲ್ಲದ ಕಾರಣ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕನ್ಯಾನ್ ಸಿಂಗ್ ಇನ್ನೊಂದು ಮದುವೆಯಾಗಿದ್ದಾನೆಂದು ಆರೋಪಿ ಪತ್ನಿ ಶಂಕೆ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ. ಘಟನೆಯ ದಿನ, ವಿವಾದ ಹೆಚ್ಚಾಗಿದ್ದು, ಪತ್ನಿ, ಪತಿ ಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದಾಳೆ. ಕನ್ಯಾನ್ ಸಿಂಗ್ ಕೂಗಿಕೊಳ್ತಿದ್ದಂತೆ ಇಲ್ಲಿಗೆ ಬಂದ ಗ್ರಾಮಸ್ಥರು ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದಾರೆ.