ಮಣಿಪುರದಲ್ಲಿ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ರಚನೆಯಾಗಿದ್ದ ಬಿಜೆಪಿ ನೇತೃತ್ವದ ಸರ್ಕಾರ ಈಗ ಪತನಗೊಳ್ಳುವ ಭೀತಿ ಎದುರಿಸುತ್ತಿದೆ. ಪಕ್ಷದ ಮೂವರು ಹಾಗೂ ಬೆಂಬಲಿತ ಪಕ್ಷದ ಆರು ಶಾಸಕರು ಸೇರಿದಂತೆ ಒಟ್ಟು ಒಂಬತ್ತು ಮಂದಿ ರಾಜೀನಾಮೆ ನೀಡಿರುವುದೇ ಇದಕ್ಕೆ ಕಾರಣ.
2017ರಲ್ಲಿ ಮಣಿಪುರ ವಿಧಾನಸಭೆಯ 60 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 28, ಬಿಜೆಪಿ 21, ನ್ಯಾಷನಲ್ ಪೀಪಲ್ಸ್ ಪಾರ್ಟಿ 4, ನಾಗಾಸ್ ಪೀಪಲ್ ಫ್ರಂಟ್ 4, ತೃಣಮೂಲ ಕಾಂಗ್ರೆಸ್ 1 ಹಾಗೂ ಓರ್ವ ಪಕ್ಷೇತರ ಶಾಸಕರು ಜಯ ಸಾಧಿಸಿದ್ದರು. ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಏಳು ಮಂದಿ ಶಾಸಕರುಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಅಲ್ಲದೆ ಇತರ ಪಕ್ಷಗಳು ಸಹ ಬಿಜೆಪಿಯನ್ನು ಬೆಂಬಲಿಸಿದ ಕಾರಣ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಬಿಜೆಪಿ ಸೇರ್ಪಡೆಗೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಅನರ್ಹ ಮಾಡಲು ಸ್ಪೀಕರ್ ಬಳಿ ದೂರು ಇದ್ದು, ಈ ಪೈಕಿ ಒಬ್ಬ ಶಾಸಕರು ಈಗಾಗಲೇ ಅನರ್ಹಗೊಳಿಸಲಾಗಿದೆ. ಅಲ್ಲದೆ ಏಳು ಶಾಸಕರು ಸದ್ಯಕ್ಕೆ ವಿಧಾನಸಭೆ ಪ್ರವೇಶಿಸುವಂತಿಲ್ಲ ಎಂದು ಮಣಿಪುರ ಹೈಕೋರ್ಟ್ ಆದೇಶ ನೀಡಿದೆ. ಇದರ ಮಧ್ಯೆ ಸರ್ಕಾರದಲ್ಲಿದ್ದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ನಾಲ್ವರು ಸಚಿವರು ಹಾಗೂ ಬಿಜೆಪಿಯ ಮೂವರು ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ಮುಂದಿನ ರಾಜಕೀಯ ವಿದ್ಯಾಮಾನ ಕುತೂಹಲಕ್ಕೆ ಕಾರಣವಾಗಿದೆ.