ನವದೆಹಲಿ: ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರೇ ಮುಂದುವರಿಯುವ ಬಗ್ಗೆ ಸೋಮವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ 1 ವರ್ಷದವರೆಗೂ ಸೋನಿಯಾ ಗಾಂಧಿಯವರೇ ಮುಂದುವರೆಯುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.
ಅಲ್ಲದೇ ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೂ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುವಂತೆ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಸಿಡಬ್ಲ್ಯೂಸಿ ಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, 23 ಕಾಂಗ್ರೆಸ್ ಹಿರಿಯ ನಾಯಕರ ಪತ್ರ ಭಿನ್ನಮತ ಸ್ಫೋಟಕ್ಕೂ ಕಾರಣವಾಯಿತು. ಅಲ್ಲದೇ ಪಕ್ಷಕ್ಕಾಗುವ ನಷ್ಟವನ್ನು ಮನಗಂಡು ತಕ್ಷಣ ರಾಜಿಯಾಗಿ ಡ್ಯಾಮೇಜ್ ಕಂಟ್ರೋಲ್ ಗೂ ನಾಯಕರು ಮುಂದಾಗಿದ್ದಾರೆ.
ಅಂತಿಮವಾಗಿ ಸಭೆಯಲ್ಲಿ ಮುಂದಿನ ಒಂದು ವರ್ಷದವರೆಗೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿರಬೇಕು ಎಂಬ ಆಗ್ರಹವೂ ಕೇಳಿಬಂತು.
ಹಿರಿಯ ನಾಯಕರ ಒತ್ತಡಕ್ಕೆ ಮಣಿದ ಸೋನಿಯಾ ಗಾಂಧಿ ಮುಂದಿನ ಒಂದು ವರ್ಷದವರೆಗೂ ಅಧ್ಯಕ್ಷರಾಗಿ ಮುಂದುವರೆಯಲು ಸಮ್ಮತಿ ನೀಡಿದ್ದಾರೆ.