ನ್ಯಾಯಾಂಗ ನಿಂದನೆ ಪ್ರಕರಣವನ್ನು ಮರುಪರಿಶೀಲಿಸುವಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಗೆ ಕೋರ್ಟ್ 1 ರೂಪಾಯಿ ದಂಡ ವಿಧಿಸಿತ್ತು.
ಆಗಸ್ಟ್ 31ರಂದು ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಪ್ರಶಾಂತ್ ಭೂಷಣ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 31ರಂದು ತೀರ್ಪು ಬಂದ ಮೇಲೆ ಒಂದು ರೂಪಾಯಿ ದಂಡ ಪಾವತಿಸಿದ್ದ ಪ್ರಶಾಂತ್ ಭೂಷಣ್, ದಂಡ ಪಾವತಿ ಮಾಡಿದೆ ಎಂದ್ರೆ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡೆ ಎಂದಲ್ಲವೆಂದು ಹೇಳಿದ್ದರು.
ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ನಲ್ಲಿ ಎರಡು ಅರ್ಜಿ ಸಲ್ಲಿಸಿದ್ದಾರೆ. ಒಂದು ಆಗಸ್ಟ್ 14ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಒಂದು ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ಆಗಸ್ಟ್ 31ರಂದು ನೀಡಿದ ತೀರ್ಪಿನ ಮರುಪರಿಶೀಲನೆ ಅರ್ಜಿಯಾಗಿದೆ.
2009ರಲ್ಲಿ ತೆಹಲ್ಕಾಗೆ ನೀಡಿದ್ದ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್ ನ 16 ನಿವೃತ್ತ ನ್ಯಾಯಮೂರ್ತಿಗಳಲ್ಲಿ ಅರ್ಧ ಜನರು ಭ್ರಷ್ಟರು ಎಂದಿದ್ದರು. ಹಾಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾರ್ಲೆ ಡೇವಿಡ್ ಸನ್ ಬೈಕ್ ಮೇಲೆ ಕುಳಿತಿದ್ದ ಫೋಟೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ನ್ಯಾಯಾಂಗ ನಿಂದನೆ ವಿಚಾರಣೆಗೊಳಗಾಗಿದ್ದರು.