ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಈಗ ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈಗ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಏಳು ದಿನಗಳೊಳಗಾಗಿ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ. ಇದರ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಮಾಡಿರುವ ಕಾರ್ಯವೊಂದು ವ್ಯಾಪಕ ಖಂಡನೆಗೊಳಗಾಗಿದೆ.
ಅತ್ಯಾಚಾರಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟ ವೇಳೆ ಆಕೆಯ ಶವವನ್ನು ತೆಗೆದುಕೊಂಡು ಬಂದ ಪೊಲೀಸರು ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಗ್ರಾಮಸ್ಥರು ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದರೂ ಸಹ ಅದಕ್ಕೆ ಸ್ಪಂದಿಸಿಲ್ಲ.
ಪೊಲೀಸರು ಮಾಡಿರುವ ಈ ಅಮಾನವೀಯ ಕೃತ್ಯವನ್ನು ಬಯಲಿಗೆಳೆದಿದ್ದು ‘ಇಂಡಿಯಾ ಟುಡೇ’ ಪತ್ರಕರ್ತೆ ತನುಶ್ರೀ ಪಾಂಡೆ. ತಮ್ಮ ಕ್ಯಾಮರಾಮನ್ ಜೊತೆ ಸ್ಥಳದಲ್ಲಿದ್ದ ತನುಶ್ರೀ ಪಾಂಡೆ ಪೊಲೀಸರ ಕೃತ್ಯದ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದಾರೆ. ಹೀಗಾಗಿಯೇ ಅಂದು ನಡೆದ ಈ ಘಟನೆ ಸಾಕ್ಷಿ ಸಮೇತ ಹೊರಜಗತ್ತಿಗೆ ತಿಳಿಯುವಂತಾಯಿತು.