ದೆಹಲಿಯಲ್ಲಿ ಪತ್ರಕರ್ತರೊಬ್ಬರು ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಖಿನ್ನತೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ.
ಹೌದು, ಈಶಾನ್ಯ ದೆಹಲಿಯ ಭಜನ್‌ಪುರದ ನಿವಾಸಿಯಾಗಿದ್ದ 34 ವರ್ಷದ ತರುಣ್ ಸಿಸೋಡಿಯಾ ದೆಹಲಿಯಲ್ಲಿ ಹಿಂದಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಸೋಂಕು ತಗುಲಿದ್ದರಿಂದ ಇವರಿಗೆ ಏಮ್ಸ್‌ನ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈತ ಇದ್ದಕ್ಕಿದ್ದ ಹಾಗೆ ಮಹಡಿ ಮೇಲಿಂದು ಬಿದ್ದು ಸತ್ತಿದ್ದು ಎಲ್ಲರಿಗೂ ಆಶ್ಚರ್ಯ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.
ಇದರ ಬೆನ್ನಲ್ಲೇ ಇದೀಗ ವಾಟ್ಸಾಪ್ ಚಾಟ್ ನ ಸ್ಕ್ರೀನ್ ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಸ್ಪತ್ರೆಯಲ್ಲಿನ ವೈದ್ಯರ ಬೇಜವಾಬ್ದಾರಿ ಹಾಗೂ ಆಸ್ಪತ್ರೆಯ ಕಳಪೆ ಗುಣಮಟ್ಟದ ಕುರಿತಂತೆ ಸ್ನೇಹಿತರ ಜೊತೆ ತರುಣ್ ಮೆಸೇಜ್ ಮಾಡಿದ್ದರಂತೆ. ಇದರಲ್ಲಿ ಆಸ್ಪತ್ರೆಯ ಬಗ್ಗೆ ಹೇಳಿದ್ದಾರೆ. ಹಾಗೂ ತಮ್ಮ ಕೊಲೆಯಾಗುವ ಸಾಧ್ಯತೆ ಇದೆ ಎಂದೂ ಬರೆದಿದ್ದರು ಎನ್ನಲಾಗಿದೆ. ಅವರ ಸ್ನೇಹಿತರು ತರುಣ್ ಸಾವಿಗೆ ನ್ಯಾಯ ಕೊಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಪ್ರಾರಂಭ ಮಾಡಿದ್ದಾರೆ.