ಕೊರೊನಾ ವೈರಸ್ ಕೇಂದ್ರ ಬಿಂದುವಾಗಿದ್ದ ದೆಹಲಿ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾ ಅಡ್ಡವಾಗಿದ್ದ ದೆಹಲಿ ಇದ್ರಿಂದ ಹೊರ ಬರ್ತಿದೆ. ಸಕಾರಾತ್ಮಕ ದರವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 15 ಸಾವಿರವಿದೆ. ಚೇತರಿಕೆ ಪ್ರಮಾಣವು ಶೇಕಡಾ 84 ರಷ್ಟಿದೆ. ಅನೇಕ ರಾಜ್ಯಗಳಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಗಳ ಕೊರತೆಯಿದ್ದರೆ, ದೆಹಲಿಯಲ್ಲಿ ಶೇಕಡಾ 77 ರಷ್ಟು ಬೆಡ್ ಖಾಲಿಯಿದೆ.
ದೆಹಲಿಯ ಸಕಾರಾತ್ಮಕ ದರವು ಜೂನ್ ತಿಂಗಳಲ್ಲಿ ಕಳವಳಕಾರಿಯಾಗಿತ್ತು. ಇದು ಜೂನ್ 8-14 ರ ನಡುವೆ ಶೇಕಡಾ 32ಕ್ಕೆ ತಲುಪಿತ್ತು. ಆದರೆ ಈ ವಾರ ಅದು ಕೇವಲ ಶೇಕಡಾ 7 ಕ್ಕೆ ಇಳಿದಿದೆ. ರಾಜಧಾನಿಯಲ್ಲಿ ಪರೀಕ್ಷೆ ಹೆಚ್ಚಾದಾಗ, ಒಂದು ದಿನದಲ್ಲಿ ಸುಮಾರು 4 ಸಾವಿರ ಸೋಂಕಿತರು ಹೊರಗೆ ಬರ್ತಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಸೋಮವಾರ ಒಟ್ಟು 954 ಪ್ರಕರಣಗಳು ವರದಿಯಾಗಿವೆ. 49 ದಿನಗಳ ನಂತರ 1000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದ್ದು, ನೆಮ್ಮದಿ ತಂದಿದೆ.
ದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1 ಲಕ್ಷ 23 ಸಾವಿರ ದಾಟಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 15 ಸಾವಿರವಿದೆ. ಇದು ಸ್ಥಿರವಾದ ಕುಸಿತವನ್ನು ದಾಖಲಿಸುತ್ತಿದೆ. ವಾರಗಳವರೆಗೆ ನಿರಂತರವಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಏಕೈಕ ರಾಜ್ಯ ಅಥವಾ ಕೇಂದ್ರ ಪ್ರದೇಶ ದೆಹಲಿಯಾಗಿದೆ.