ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು.
ಆತನನ್ನು ಶುಕ್ರವಾರ ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿತ್ತು. ದುಬೆ ಪೊಲೀಸರ ಬಳಿ ಇದ್ದ ಗನ್ ನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ. ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು.
ಜೊತೆಗೆ ಅಪಘಾತದ ವಿಚಾರವಾಗಿ ಮಾತನಾಡಿದ್ದ ಪೊಲೀಸರು ಕಾರು ಸ್ಕಿಡ್ ಆಗಿತ್ತು ಈ ವೇಳೆ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಇದೀಗ ದುಬೆಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಎಮ್ಮೆಗಳು ಅಡ್ಡಬಂದ ಕಾರಣ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಅನೇಕ ಅನುಮಾನಗಳನ್ನು ಹುಟ್ಟಿಸುವಂತಿವೆ.
ಇನ್ನು ದುಬೆ ಎನ್ ಕೌಂಟರ್ ಪ್ರಕರಣವನ್ನು ಹಲವು ರಾಜಕಾರಣಿಗಳು ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಬಹಿರಂಗಗೊಂಡ ವಿಡಿಯೋ ಒಂದು ಸಾರ್ವಜನಿಕರಲ್ಲೂ ಹಲವು ಪ್ರಶ್ನೆಗಳು ಮೂಡುವಂತೆ ಮಾಡುತ್ತಿದೆ. ಜೊತೆಗೆ ದುಬೆ ಕರೆದುಕೊಂಡು ಹೋಗುತ್ತಿದ್ದ ವಾಹನಗಳನ್ನು ಪತ್ರಕರ್ತರು ಫಾಲೋ ಮಾಡುವುದನ್ನು ನಿರ್ಭಂದ ಮಾಡಿದ್ದು ಅನುಮಾನ ಮೂಡಿಸುತ್ತಿವೆ.