5ನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಧಾರ್ಮಿಕ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದಕ್ಕಾಗಿ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಜೂನ್ 8 ರಿಂದ ಧಾರ್ಮಿಕ ಮಂದಿರಗಳು ತೆರೆಯಲಿದ್ದು, ತಿರುಪತಿಯಲ್ಲೂ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಹಂತಹಂತವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.
ಜೂನ್ 8 ಮತ್ತು 9ರಂದು ಟಿಟಿಡಿ ಸಿಬ್ಬಂದಿ ಮತ್ತು ಕುಟುಂಬ ವರ್ಗದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಜೂನ್ 10ರಂದು 500 ಮಂದಿ ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 11ರಿಂದ ಮೂರು ಸಾವಿರ ಮಂದಿಗೆ 300 ರೂಪಾಯಿ ಟೋಕನ್ ಪಡೆದು ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಅಲ್ಲದೆ ತಿರುಪತಿಗೆ ಆಗಮಿಸುವ ಭಕ್ತರಿಗೆ ಪುಷ್ಕರಣಿಯಲ್ಲಿ ಸ್ನಾನ ಮಾಡಲು ಅವಕಾಶ ನೀಡಲಾಗುವುದಿಲ್ಲ. ಜೊತೆಗೆ ಛತ್ರಗಳಲ್ಲಿ ಒಂದು ಕೋಣೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.