ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಎಂ.ಕೆ. ಸ್ಟಾಲಿನ್ ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.
ತಮಿಳುನಾಡಿನ ರೈಸ್ ರೇಷನ್ ಕಾರ್ಡ್ ದಾರರ ಪ್ರತಿ ಕುಟುಂಬಕ್ಕೆ 4000 ರೂಪಾಯಿ ಸಹಾಯಧನ ನೀಡುವುದಾಗಿ ತಿಳಿಸಿದ್ದು, ಅದರಲ್ಲಿ 2000 ರೂ. ಮೇ ತಿಂಗಳಲ್ಲಿ ಹಾಗೂ ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಹಂಚಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಹಾಲಿನ ಪ್ಯಾಕೆಟ್ ಬೆಲೆಯಲ್ಲಿ 3 ರೂಪಾಯಿ ಕಡಿತ, ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವೆಚ್ಚ ಸಿಎಂ ವಿಮಾ ಯೋಜನೆ ವ್ಯಾಪ್ತಿಗೆ ಹಾಗೂ ಪ್ರಚಾರದ ವೇಳೆ ನೀಡಿದ ಭರವಸೆ ಈಡೇರಿಕೆ, ಜನರ ಕುಂದುಕೊರತೆಗಳನ್ನು ನೂರು ದಿನಗಳಲ್ಲಿ ಪರಿಹರಿಸಲು ಹೊಸ ಸಚಿವಾಲಯದ ರಚನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ.