ಕಳೆದ ವರ್ಷ ದೇಶದಲ್ಲಿ ಕೊರೊನಾ ಆರಂಭವಾದ ವೇಳೆ ಇದರ ನಿಯಂತ್ರಣಕ್ಕಾಗಿ ಸರಕಾರಗಳು ಕೈಗೊಂಡ ಕ್ರಮಗಳಿಂದ ದೊಡ್ಡ ಹೊಡೆತ ಬಿದ್ದಿದ್ದು ಚಿತ್ರರಂಗಕ್ಕೆ. ಕೊರೊನಾ ಹರಡದಂತೆ ತಡೆಯುವ ಸಲುವಾಗಿ ಚಿತ್ರಮಂದಿರಗಳನ್ನು ಅಂದು ಬಂದ್ ಮಾಡಲಾಗಿದ್ದು, ಲಾಕ್ ಡೌನ್ ತೆರವುಗೊಳಿಸಿದ ಬಳಿಕವೂ ಹಲವು ದಿನಗಳ ಕಾಲ ನಿರ್ಬಂಧ ಮುಂದುವರೆದಿತ್ತು.
ಆ ಬಳಿಕ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದರೂ ಸಹ ಶೇಕಡಾ 50 ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆ ಬಳಿಕ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಚಿತ್ರರಂಗದ ಗಣ್ಯರ ಒತ್ತಡಕ್ಕೆ ಮಣಿದು ಸರ್ಕಾರ ಶೇಕಡ 100 ಪ್ರೇಕ್ಷಕರಿಗೆ ಅನುಮತಿ ನೀಡಿತ್ತು. ಹೀಗಾಗಿ ಚಿತ್ರರಂಗ ಚೇತರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು.
‘ಆಧಾರ್’ ವಿಚಾರದಲ್ಲಿ ಕೇಂದ್ರದಿಂದ ಮತ್ತೊಂದು ನಿರ್ಧಾರ, ಕೆಲ ಸೇವೆಗಳಿಗೆ ಅಗತ್ಯವಿಲ್ಲ ಆಧಾರ್
ದೇಶದಲ್ಲಿ ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೀಗಾಗಿ ಚಿತ್ರಮಂದಿರಗಳಿಗೆ ಮತ್ತೆ ಶೇಕಡಾ 50 ಪ್ರೇಕ್ಷಕರ ನಿರ್ಬಂಧ ಹೇರಬಹುದೆಂಬ ಭೀತಿ ಕಾಡುತ್ತಿದೆ. ಜೊತೆಗೆ ಒಂದೊಮ್ಮೆ ಕೊರೊನಾ ಏರಿಕೆಯಾದರೆ ಮತ್ತೆ ಚಿತ್ರಮಂದಿರಗಳನ್ನು ಬಂದ್ ಮಾಡಬಹುದೆಂಬ ಆತಂಕವೂ ಕಾಡುತ್ತಿದೆ. ಕಳೆದ ಒಂದು ವರ್ಷದಿಂದ ಯಾವುದೇ ಚಟುವಟಿಕೆಗಳಿಲ್ಲದೆ ಕಂಗೆಟ್ಟಿದ್ದ ಚಿತ್ರರಂಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾಗಲೇ ಮತ್ತೆ ವಕ್ಕರಿಸಿರುವ ಕೊರೊನಾ ಎರಡನೇ ಬರಸಿಡಿಲಿನಂತೆ ಬಂದೆರಗಿದ್ದು, ಈ ಮಹಾಮಾರಿ ಯಾವಾಗ ತೊಲಗುತ್ತದೋ ಎಂಬ ನಿರೀಕ್ಷೆಯಲ್ಲಿ ಚಿತ್ರರಂಗದ ಮಂದಿ ಇದ್ದಾರೆ.