ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಅನ್ನೋ ಬೆನ್ನಲ್ಲೇ ತಜ್ಞರು ನೀಡುತ್ತಿರುವ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಬೆನ್ನಲ್ಲೇ ತಜ್ಞರು ನೀಡುತ್ತಿರುವ ವರದಿಗಳು ಕೂಡ ಜನರನ್ನು ಆತಂಕಕ್ಕೀಡು ಮಾಡಿದೆ.
ಹೌದು, ದೇಶದ ಒಂದಿಷ್ಟು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಚಂಢೀಗಡ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಒಂದಿಷ್ಟು ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಎದ್ದಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಈ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣದ ಜೊತೆಗೆ ಸಾವಿನ ಪ್ರಮಾಣ ಕೂಡ ಹೆಚ್ಚಾಗಿದೆ.
ಆರೋಗ್ಯ ತಜ್ಞ ರಿಜಿ ಎಂ ಜಾನ್ ಹೇಳುವ ಪ್ರಕಾರ ಒಂದಿಷ್ಟು ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆಯ ಪ್ರಭಾವ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಪ್ರಮಾಣದಲ್ಲೂ ಹೆಚ್ಚಳ ಕಾಣುತ್ತಿದೆ ಎಂದಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ವೇಗವಾಗಿ ತಗುಲಬಹುದು. ಹೀಗಾಗಿ ಎಷ್ಟು ಮುನ್ನೆಚ್ಚರಿಕೆ ಇದ್ದರೂ ಸಾಲದು. ಕೊರೊನಾ ಎರಡನೇ ಅಲೆ ಭೀಕರವಾಗಿರಲಿದೆ ಎನ್ನುತ್ತಿವೆ ಹಲವು ವರದಿಗಳು.