ಮುಂಬೈ: ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಬಾಬಾ ಆಮ್ಟೆ ಅವರ ಮೊಮ್ಮಗಳು, ಖ್ಯಾತ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ ಶೀತಲ್ ಆಮ್ಟೆ ಕರಾಜಿಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಂದ್ರಾಪುರ ಜಿಲ್ಲೆಯ ಆನಂದವನ್ ದಲ್ಲಿ ತಮ್ಮ ನಿವಾಸದಲ್ಲಿ ವಿಷಪೂರಿತ ಇಂಜಕ್ಷನ್ ನ್ನು ಚುಚ್ಚಿಕೊಂಡು ಅಸ್ವಸ್ಥರಾಗಿದ್ದ ಡಾ.ಶೀತಲ್ ಆಮ್ಟೆ ಅವರನ್ನು ವರೋರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಡಾ.ಶೀತಲ್ ಆತ್ಮಹತ್ಯೆಗೂ ಮುನ್ನ ಬೆಳಿಗ್ಗೆ ಟ್ವಿಟರ್ ನಲ್ಲಿ ಕ್ಯಾನ್ ವಾಸ್ ಪೇಂಟಿಂಗ್ ಫೋಟೋ ಒಂದನ್ನು ಹಂಚಿಕೊಂಡು ’ವಾರ್ ಆಂಡ್ ಪೀಸ್” ಎಂದು ಬರೆದುಕೊಂಡಿದ್ದರು. ಟ್ವಿಟರ್ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೀತಲ್ ಆತ್ಮಹತ್ಯೆ ರಹಸ್ಯದ ಬಗ್ಗೆ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ ಡಾ.ಶೀತಲ್ ಆಮ್ಟೆ ಕುಷ್ಠರೋಗಿಗಳ ಆರೈಕೆಗಾಗಿ ಸ್ಥಾಪಿತವಾಗಿದ್ದ ಮಹಾರೋಗಿ ಸೇವಾ ಸಮಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶ್ವಸಂಸ್ಥೆಯಿಂದ ಯಂಗ ಗ್ಲೋಬಲ್ ಲೀಡರ್ ಎಂಬ ಪ್ರಶಂಸೆಗೂ ಪಾತ್ರರಾಗಿದ್ದರು.