ಕೊರೊನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಅನೇಕ ರಾಜಕಾರಣಿಗಳು ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ಕೋವಿಡ್‌ನಿಂದ ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಸುರೇಶ್ ಅಂಗಡಿಯವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದಿದ್ದರೆ ಸುರೇಶ್ ಅಂಗಡಿ ಬದುಕುತ್ತಿದ್ದರೇನೋ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಹಲ್ಲು ನೋವಿನಿಂದ ಬಳಲುತ್ತಿದ್ದರಂತೆ ಸುರೇಶ್ ಅಂಗಡಿ. ನಂತರ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಈ ಜ್ವರ ನಿರ್ಲಕ್ಷ್ಯ ಮಾಡಿದ್ದೇ ಅವರ ಪ್ರಾಣಕ್ಕೆ ಕುತ್ತು ತಂತಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡುತ್ತಿದೆ.
ಹಲ್ಲು ನೋವಿಗೆ ಬಂದಿರುವ ಜ್ವರ ಎಂದುಕೊಂಡ ಸುರೇಶ್ ಅಂಗಡಿಯವರು, ಆ ಜ್ವರದಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಗೆ ಹೋದ ನಂತರ ಅವರಿಗೆ ಕೆಮ್ಮು ಹಾಗೂ ಗಂಟಲು ನೋವು ಹೆಚ್ಚಾಗಿದೆ. ದೇಹದ ಸ್ಥಿತಿ ಕ್ಷೀಣಿಸುತ್ತಿದೆ ಎಂಬುದು ಗೊತ್ತಾದ ಬಳಿಕ ಏಮ್ಸ್ ಆಸ್ಪತ್ರೆಗೆ ದಾಖಲಾದಾಗ ಕೊರೊನಾ ಸೋಂಕು ಇರುವುದು ಧೃಡವಾಗಿದೆ. ಜ್ವರ ಬಂದ ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಿದ್ದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತು ಗುಣಮುಖರಾಗುತ್ತಿದ್ದರೇನೋ. ಆದರೆ ಇದೀಗ ನಿರ್ಲಕ್ಷ್ಯದಿಂದಲೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ ಸುರೇಶ್ ಅಂಗಡಿ.