ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಗಸ್ಟ್ 5 ರಿಂದ ಅನ್ಲಾಕ್ 3 ರ ಅಡಿಯಲ್ಲಿ ಜಿಮ್ ಮತ್ತು ಯೋಗ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದಕ್ಕೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ( ಎಸ್ಒಪಿ) ಬಿಡುಗಡೆ ಮಾಡಲಾಗಿದೆ. ಜಿಮ್, ಯೋಗ ಸೆಂಟರ್ ಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಲಾದ ಲಾಕ್‌ಡೌನ್ ಕಾರಣದಿಂದಾಗಿ ಸುಮಾರು ನಾಲ್ಕು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಜಿಮ್ ತೆರೆಯಲು ಜಿಮ್ ಮಾಲೀಕರು ಉತ್ಸುಕರಾಗಿದ್ದಾರೆ. ಸೋಂಕನ್ನು ತಡೆಗಟ್ಟಲು ಸಂಪೂರ್ಣ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕಂಟೈನ್‌ಮೆಂಟ್ ವಲಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯುವಂತಿಲ್ಲ. 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಪೂರ್ವ ಅನಾರೋಗ್ಯ ಪೀಡಿತರು, ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಜಿಮ್,ಯೋಗ ಕೇಂದ್ರಕ್ಕೆ ಬರುವಂತಿಲ್ಲ. ಜಿಮ್‌ಗಳು ಮತ್ತು ಯೋಗ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪರಸ್ಪರ ಕನಿಷ್ಠ 6 ಅಡಿಗಳಷ್ಟು ದೂರದಲ್ಲಿರಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ.
ಕೈ ತೊಳೆಯಲು ಹ್ಯಾಂಡ್ ಸ್ಯಾನಿಟೈಜರ್ ಇಡಬೇಕು. ಉಗುಳುವುದನ್ನು ನಿಷೇಧಿಸಬೇಕು.ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು.ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಲಿದೆ. ಎಸಿಯನ್ನು 24 ಮತ್ತು 30 ರ ನಡುವೆ ಇಡಬೇಕು. ಸಾಮಾಜಿಕ ಅಂತರ ಗಮನದಲ್ಲಿಟ್ಟುಕೊಂಡು ಲಾಕರ್‌ಗಳನ್ನು ಬಳಸಬಹುದು. ಹಣ ಪಾವತಿಗೆ ಕಾರ್ಡ್ ಬಳಸುವುದು.ಮುಚ್ಚಿದ ಡಸ್ಟ್ ಬಿನ್ ಕಡ್ಡಾಯವಾಗಲಿದೆ.
ಸ್ಪಾ,ಈಜುಕೊಳವನ್ನು ಮುಚ್ಚಲಾಗಿದೆ. ಯೋಗಕ್ಕೆ ಹೋಗುವವರು ಮ್ಯಾಟ್ ಮನೆಯಿಂದ ತರಬೇಕು. ನಗು ಕೂಟಕ್ಕೆ ಅನುಮತಿ ನೀಡಲಾಗಿಲ್ಲ.ಜಿಮ್ ಉಪಕರಣಗಳನ್ನು ಆಗಾಗ ಸ್ಯಾನಿಟೈಜರ್ ಮಾಡಬೇಕು. ಮಾರ್ಗಸೂಚಿ ನಂತ್ರ ಕೆಲ ಜಿಮ್ ಗಳ ನಿರ್ವಾಹಕರು ಪಿಪಿಇ ಕಿಟ್ ಧರಿಸಲು ನಿರ್ಧರಿಸಿದ್ದಾರೆ. ಜಿಮ್ ಗೆ ಬರುವವರ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.