ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಭಾರತದ ಆರ್ಥಿಕತೆ ಚೇತರಿಕೆಯತ್ತ ಸಾಗಿದೆ ಎಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ ಭಾರತ 3.0 ಅಡಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜಿಡಿಪಿ ಏರಿಕೆಯಾಗುತ್ತಿದೆ. ಹೂಡಿಕೆಯೂ ನಿರಂತರವಾಗಿದೆ. ಅಲ್ಲದೇ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಯೂ ಹೆಚ್ಚಿದೆ ಎಂದು ತಿಳಿಸಿದರು.
ಆತ್ಮನಿರ್ಭರ ಭಾರತದಡಿ ಘೋಷಣೆಯಾಗಿರುವ ಒನ್ ನೇಷನ್, ಒನ್ ರೇಷನ್ ಕಾರ್ಡ್ ಉತ್ತಮ ಪ್ರಗತಿ ಕಂಡಿದ್ದು, 28 ರಾಜ್ಯಗಳಲ್ಲಿ 68.8 ಕೋಟಿ ಫಲಾನುಭವಿಗಳನ್ನು ಒಳಗೊಂಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2.5 ಕೋಟಿ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು 1,43,262 ಕೋತಿ ಹಣ ನೀಡಲಾಗಿದೆ.
ಇನ್ನು ಆತ್ಮನಿರ್ಭರ ಭಾರತದಡಿ ಹೊಸ ಉದ್ಯೋಗ ಯೋಜನೆ ಘೋಷಿಸಲಾಗಿದ್ದು, ಆತ್ಮನಿರ್ಭರ ಭಾರತ್ ರೋಜಗಾರ್ ಯೋಜನೆ ಘೋಷಿಸಲಾಗಿದ್ದು, ಹೊಸ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಇಪಿಎಫ್ಒ ಅಡಿ ನೋಂದಣಿ ಮಾಡಿಕೊಂಡಿದ್ದರೆ ಈ ಯೋಜನೆ ಸೌಲಭ್ಯ ಸಿಗಲಿದೆ.
ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿ ಘೋಷಿಸಲಾಗಿದ್ದು, ಎರಡು ವರ್ಷಗಳವರೆಗೆ ಇದರಲ್ಲಿ ಸಬ್ಸಿಡಿ ಸಿಗಲಿದೆ. ಇನ್ನು ಆರೋಗ್ಯ ಕ್ಷೇತ್ರ ಸೇರಿದಂತೆ 26 ವಲಯಗಳಿಗೆ ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ಯೋಜನೆ ಮಾರ್ಚ್ 2021ರವರೆಗೆ ವಿಸ್ತರಣೆ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಶೇ.20ರಷ್ಟು ಹೆಚ್ಚುವರಿ ಸಾಲ ನೀಡಲಾಗುತ್ತಿದೆ.