ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ವ್ಯಾಮೋಹ. ಹೀಗಾಗಿಯೇ ವಿದೇಶಗಳಿಂದ ಕೆಲವರು ಕಳ್ಳಮಾರ್ಗದ ಮೂಲಕ ಚಿನ್ನವನ್ನು ಸಾಗಿಸುತ್ತಾರೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ.
ಈ ಹಿಂದೆ ಕೆಲವರು ಗುದದ್ವಾರದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಬಂದು ಸುಂಕದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಇದೀಗ ಮತ್ತೊಬ್ಬ ಭೂಪ ಕೊರೊನಾ ಕಾರಣವನ್ನೇ ಚಿನ್ನ ಸಾಗಿಸಲು ಉಪಯೋಗಿಸಿಕೊಂಡಿದ್ದು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಹೌದು, ಭಟ್ಕಳದ ಅಮರ್ ಎಂಬಾತ ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕೇರಳದ ಕರೀಂಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಕೊರೊನಾದಿಂದ ರಕ್ಷಣೆ ಪಡೆಯಲು ಆತ ಧರಿಸಿದ್ದ ಮಾಸ್ಕ್ ಕಸ್ಟಮ್ ಅಧಿಕಾರಿಗಳಿಗೆ ಅನುಮಾನ ಮೂಡಿಸಿದೆ.
ಆತನ N95 ಮಾಸ್ಕ್ ಪಡೆದು ಪರಿಶೀಲಿಸಿದ ವೇಳೆ ಉಸಿರು ಹೊರಹಾಕಲು ಇರುವ ವಾಲ್ವ್ ಹಿಂಭಾಗದಲ್ಲಿ 2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.