ನವದೆಹಲಿ: ಹೊಲಕ್ಕೆ ಹೋಗಿದ್ದಾಗ ಕಾಮುಕರ ಅಟ್ಟಹಾಸದಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ 20 ವರ್ಷದ ಯುವತಿ ಎರಡು ವಾರಗಳಿಂದ ಜೀವನ್ಮರಣದ ನಡುವೆ ಹೋರಾಡಿ, ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾಳೆ.
ಸೆ.14ರಂದು ಉತ್ತರ ಪ್ರದೇಶದ ಹಾತ್ರಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಅಂದು ಹೊಲಕ್ಕೆ ತನ್ನ ತಾಯಿಯ ಜೊತೆ ಹೋಗಿದ್ದ ಯುವತಿಯನ್ನು ಏಕಾಏಕಿ ಕಿಡ್ನ್ಯಾಪ್ ಮಾಡಿದ್ದ ನಾಲ್ವರು ಕಾಮುಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಷ್ಟಕ್ಕೆ ಬಿಡದ ಪಾಪಿಗಳು ವಿಷಯವನ್ನು ಆಕೆ ಬಾಯ್ಬಿಡಬಾರದು ಎಂದು ನಾಲಿಗೆಯನ್ನೇ ಕತ್ತರಿಸಿದ್ದರು. ಘಟನೆಯಿಂದಾಗಿ ಯುವತಿ ಕೈಕಾಲು ಸ್ವಾಧೀನವನ್ನು ಕಳೆದುಕೊಂಡುಬಿಟ್ಟಿದ್ದಳು.
ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದ ಯುವತಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಾರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಗೆ ಶಿಫ್ಟ್ ಮಾಡಲಾಗಿತ್ತು. ಕೆಲದಿನಗಳಿಂದ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇತ್ತು. ಇದೀಗ ಯುವತಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆಸಿ, ನಾಲಿಗೆ ಕತ್ತರಿಸಿದ್ದ ಕಾಮುಕರಾದ ರಾಮು, ಸಂದೀಪ್, ಲವಕುಶ್ ಹಾಗೂ ರವಿ ಎಂಬುವರನ್ನು ಈಗಾಗಲೇ ಬಂಧಿಸಲಾಗಿದ್ದು ಐಪಿಸಿ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಲಾಗಿದೆ.