ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಹೇಳಲಾಗಿತ್ತಲ್ಲದೆ ಆ ಸ್ಥಾನಕ್ಕೆ ಸೋನಿಯಾ ಕುಟುಂಬವನ್ನು ಹೊರತುಪಡಿಸಿದ ವ್ಯಕ್ತಿಯೊಬ್ಬರು ನೂತನ ಅಧ್ಯಕ್ಷರಾಗಲಿದ್ದಾರೆಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪಕ್ಷದ ಕೆಲ ಪ್ರಮುಖ ನಾಯಕರು ಪತ್ರ ಬರೆದಿದ್ದಾರೆಂದು ಹೇಳಲಾಗಿತ್ತು.
ಆದರೆ ಸೋಮವಾರದಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು,ಸೋನಿಯಾ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಇದಕ್ಕೂ ಮುನ್ನ ಸೋನಿಯಾ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪದಿದ್ದರೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ಒತ್ತಾಯ ನಾಯಕರಿಂದ ಕೇಳಿಬಂದಿತ್ತು. ಅಂತಿಮವಾಗಿ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಕಾಂಗ್ರೆಸ್ ನಲ್ಲಿ ನಡೆದ ಈ ಬೆಳವಣಿಗೆ ಈಗ ನೆಟ್ಟಿಗರಿಂದ ಗೇಲಿಗೊಳಗಾಗಿದ್ದು, ಶತಮಾನಗಳ ಇತಿಹಾಸವುಳ್ಳ ಪಕ್ಷವನ್ನು ಮುನ್ನಡೆಸಲು ಗಾಂಧಿ ಕುಟುಂಬವನ್ನು ಹೊರತುಪಡಿಸಿದ ಅನ್ಯ ವ್ಯಕ್ತಿಗಳಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರುಗಳು ಕೂಡಾ ಮರುಮಾತನಾಡದೆ ಸೋನಿಯಾ ಗಾಂಧಿಯವರ ನಾಯಕತ್ವ ಒಪ್ಪಿಕೊಂಡಿರುವುದನ್ನು ಪ್ರಶ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನಲ್ಲಿ ನಡೆದಿರುವ ಈ ಬೆಳವಣಿಗೆ ವಿರೋಧ ಪಕ್ಷಗಳಿಗೆ ಟೀಕಾಸ್ತ್ರವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.