ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ಸಂಘರ್ಷ ನಡೆದಿದ್ದು, ಕನಿಷ್ಟ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತ ಚೀನಾದ 43 ಯೋಧರು ಸಾವನ್ನಪ್ಪಿದ್ದಾರಂತೆ. ಈ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸಂಬಂಧ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ 19 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆಂದು ಹೇಳಲಾಗುತ್ತಿದೆ. ಜೂನ್ 19ರ ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಇದ್ದು, ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಲಿದ್ದಾರಂತೆ.
ಕಳೆದ ಕೆಲವು ದಿನಗಳಿಂದ ಲಡಾಖ್‌ನ ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಜೂನ್ 6 ರಂದು ಭಾರತ-ಚೀನಾ ಉನ್ನತ ಸೇನಾ ಕಮಾಂಡರ್‌ಗಳ ಸಭೆಯ ಬಳಿಕ ಗಡಿ ಉದ್ವಿಗ್ನತೆ ಕಡಿಮೆಯಾಗಿತ್ತು. ಪೂರ್ವ ಲಡಾಖ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಸೋಮವಾರ ತಡರಾತ್ರಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು.