ಭೋಪಾಲ್: ಬಹಿರಂಗ ಕಾರ್ಯಕ್ರಮವೊಂದರಲ್ಲಿ ಕ್ಷೌರ ಮಾಡಿಸಿಕೊಂಡ ಸಚಿವರೊಬ್ಬರು ಕ್ಷೌರಿಕನ ಕೌಶಲ್ಯ ಮೆಚ್ಚಿ ಆತನಿಗೆ 60 ಸಾವಿರ ರೂ.ಭಕ್ಷೀಸು ನೀಡಿದ್ದಾರೆ.
ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯ ಗುಲೈಮಾಲ್ ಎಂಬಲ್ಲಿ ಈ ಅಪರೂಪದ ಘಟನೆ ನಡೆದಿದೆ. ಸ್ಥಳೀಯ ಕ್ಷೌರಿಕ ರೋಹಿದಾಸ ಎಂಬಾತ ಅರಣ್ಯ ಸಚಿವ ವಿಜಯ ಸಹಾ ಅವರ ಬಳಿ ಸಲೂನ್ ಹಾಕಲು ಆರ್ಥಿಕ ಸಹಕಾರ ಕೇಳಿದ್ದ.
ಗುರುವಾರ ಕಾರ್ಯಕ್ರಮವೊಂದು ನಡೆದಾಗ ಆತನನ್ನು ಕರೆದ ಸಚಿವ ವಿಜಯ ಸಹಾ ಅವರು ಕ್ಷೌರ ಮಾಡುವಂತೆ ತಿಳಿಸಿದ್ದರು. ರೋಹಿದಾಸ ಜನರ ಎದುರೇ ಮಾಸ್ಕ್ ಧರಿಸಿ ಸಚಿವರ ತಲೆ ಕೂದಲು ಕಟ್ ಮಾಡಿದ್ದ. ಸಚಿವರು ಸ್ಥಳದಲ್ಲೇ ಆತನಿಗೆ 60 ಸಾವಿರ ರೂ. ನೀಡಿದ್ದಾರೆ.
“ಕೊರೊನಾ ಭಯದಿಂದ ಜನ ಕ್ಷೌರ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕ್ಷೌರಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಬಹಿರಂಗ ಕಾರ್ಯಕ್ರಮದಲ್ಲಿ ಕ್ಷೌರ ಮಾಡಿಸಿಕೊಂಡು ನಾನು ಜನರಲ್ಲಿ ವಿಶ್ವಾಸ ಮೂಡಿಸಿದ್ದೇನೆ. ಸಚಿವರ ವಿವೇಚನಾ ನಿಧಿಯಿಂದ ಆತನಿಗೆ ಹಣ ನೀಡಲಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.