ಕೊರೊನಾ ಮಹಾಮಾರಿಯ ಕರಿ ನೆರಳು ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಒಂದೇ ದಿನಕ್ಕೆ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರಕ್ಕೂ ಸೋಂಕನ್ನು ಕಡಿಮೆ ಮಾಡುವುದು ಹೇಗೆ ಎಂಬ ಸವಾಲು ಮುಂದಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಐಸಿಎಂಆರ್ ತಯಾರಿ ನಡೆಸುತ್ತಿದೆ.
ಹೌದು, ಈಗಾಗಲೇ ಭಾರತದಲ್ಲಿ ಲಕ್ಷಾಂತರ ಮಂದಿಗೆ ಸೋಂಕು ತಗುಲಿದೆ. ಇನ್ನು ಮುಂದಿನ ದಿನಗಳಲ್ಲಿ ದೇಶದ ಎಷ್ಟು ಜನರು ಕೊರೊನಾಗೆ ತುತ್ತಾಗಬಹುದು ಎನ್ನುವುದನ್ನು ತಿಳಿದುಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ರಾಷ್ಟ್ರ ವ್ಯಾಪಿ ಸೆರೊಲಾಜಿಕಲ್ ಸಮೀಕ್ಷೆ ನಡೆಸಲಿದೆ.
ಈ ಸಮೀಕ್ಷೆಯಲ್ಲಿ ದೇಶದ ಜನರಲ್ಲಿ ರೋಗ ನಿರೋಧಕ ಶಕ್ತಿ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಐಸಿಎಂಆರ್, ವ್ಯಕ್ತಿಗಳ ರಕ್ತದಲ್ಲಿರುವ ಸೆರಂ ಅನ್ನು ಪಡೆದು ಪರೀಕ್ಷೆಗೆ ಒಳಪಡಿಸುತ್ತದೆ. ಈ ಪರೀಕ್ಷೆಯ ಮೂಲಕ ಮನುಷ್ಯನ ದೇಹದಲ್ಲಿ ಯಾವ ರೀತಿ ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನ ತಿಳಿದುಕೊಳ್ಳಬಹುದು.