ಮಹಾಮಾರಿ ಕೊರೊನಾ ಮಣಿಸಲು ಕೊನೆಗೂ ಸಂಜೀವಿನಿ ಲಭ್ಯವಾಗಿದ್ದು, ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಈ ಬೃಹತ್ ಅಭಿಯಾನದ ದುರ್ಲಾಭ ಪಡೆದುಕೊಳ್ಳಲು ಮುಂದಾಗಿರುವ ವಂಚಕರು, ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿದ್ದು, ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳುವ ಸಲುವಾಗಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ವಿವರ, ಓಟಿಪಿ ಹೇಳಿ ಎಂದು ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯ ಮುಖ್ಯಸ್ಥ ಮಿಲಿಂದ್ ಕ್ಷೀರಸಾಗರ ಎಂಬವರು ಈ ಕುರಿತು ಎಚ್ಚರಿಕೆ ನೀಡಿದ್ದು, ಇಂತಹ ವಂಚಕರ ಕರೆ ನಂಬಿದ ತಮ್ಮ ಸ್ನೇಹಿತರೊಬ್ಬರ ತಂದೆ ಎರಡು ತಾಸಿನಲ್ಲಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡ ಲಸಿಕೆ ನೋಂದಣಿ ನೆಪದಲ್ಲಿ ಕರೆ ಮಾಡುವವರು, ಮೆಸೇಜ್, ಇಮೇಲ್ ಕಳುಹಿಸುವ ವಂಚಕರ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.