ಕೊರೊನಾ ಮಹಾಮಾರಿ ಇನ್ನೂ ದೇಶ ಬಿಟ್ಟು ಹೋಗಿಲ್ಲ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾರಣಾಂತಿಕ ಸೋಂಕು ದೇಶಕ್ಕೆ ಲಗ್ಗೆ ಇಟ್ಟಿದೆ. ಈಗಾಗಲೇ ಅಹಮದಾಬಾದ್ನಲ್ಲಿ ಈ ಸೋಂಕಿಗೆ 9 ಮಂದಿ ಸಾವನ್ನಪ್ಪಿದ್ದು, 44 ಮಂದಿ ಸೋಂಕಿಗೆ ತುತ್ತಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು, ಮ್ಯೂಕಾರ್ಮೈಕೋಸಿಸ್ ಎಂಬ ಮಾರಕ ಶಿಲೀಂಧ್ರ ರೋಗವು ದೇಶದಲ್ಲಿ ತನ್ನ ಆರ್ಭಟ ಪ್ರಾರಂಭಿಸಿದೆ. ಈ ಸೋಂಕು ಮೂಗಿನಿಂದ ಪ್ರಾರಂಭವಾಗಿ ಕಣ್ಣುಗಳಿಗೆ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸೋಂಕಿನ ಶಿಲೀಂದ್ರಗಳು ಪರಿಸರದಲ್ಲಿಯೇ ಇರುತ್ತವೆಯಂತೆ. ಇದೊಂದು ಮಾರಕ ಸೋಂಕು ಆಗಿರೋದ್ರಿಂದ ಜಾಗರೂಕರಾಗಿರಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ.
ಇನ್ನು ಈ ಸೋಂಕಿಗೆ ತುತ್ತಾದ ವ್ಯಕ್ತಿಗಳು ದೆಹಲಿ ಮತ್ತು ಮುಂಬೈನ ಕೆಲವು ಆಸ್ಪತ್ರೆಗಳಲ್ಲಿಯೂ ಕಂಡು ಬಂದಿದ್ದಾರೆ. ಸೋಂಕು ತಗುಲಿದ ನಂತರ ಕಣ್ಣಿನ ಭಾಗದ ಸ್ನಾಯುಗಳ ಸೆಳೆತ ಉಂಟಾಗುತ್ತದೆ. ನಂತರ ಮೂಗು ಮತ್ತು ತಲೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಅಷ್ಟೆ ಅಲ್ಲ ಸೋಂಕಿಗೆ ಒಳಗಾದ ವ್ಯಕ್ತಿ ಪಾರ್ಶ್ವವಾಯುವಿಗೂ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಾಗೂ ಬೇರೆ ಕಾಯಿಲೆಗಳು ಇರುವ ವ್ಯಕ್ತಿಗಳು ಎಚ್ಚರಿಕೆಯಿಂದಿರಬೇಕಾಗುತ್ತದೆ.