ಕೊರೊನಾ ವೈರಸ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದೆ ಎಂದು ಈಗಾಗಲೇ ತಜ್ಞರು ಹೇಳಿದ್ದರು. ಈಗ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯದಲ್ಲಿ ಸ್ವಲ್ಪ ಹೆಚ್ಚಳವಾದ್ರೂ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗಲಿದೆ ಎಂದವರು ಹೇಳಿದ್ದಾರೆ.
ಮಾಲಿನ್ಯ ಮಟ್ಟ ಪಿಎಂ ಶೇಕಡಾ 2.5ರಷ್ಟು ಹೆಚ್ಚಾದ್ರೂ ಕೊರೊನಾ ವೈರಸ್ ಪ್ರಮಾಣ ಶೇಕಡಾ 8-9 ರಷ್ಟು ಹೆಚ್ಚಾಗುತ್ತದೆ ಎಂದು ವೈದ್ಯ ಗುಲೇರಿಯಾ ಹೇಳಿದ್ದಾರೆ. ಕೊರೊನಾ ಜೊತೆ ಹೆಚ್ಚಾಗುವ ಮಾಲಿನ್ಯವು ಶ್ವಾಸಕೋಶ ಮತ್ತು ಉಸಿರಾಟದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಜನರು ಮತ್ತಷ್ಟು ಜಾಗರೂಕರಾಗಿರಬೇಕು ಎಂದು ಗುಲೇರಿಯಾ ಹೇಳಿದ್ದಾರೆ.
ಸೆಪ್ಟೆಂಬರ್ 22 ರಂದು ದಿ ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಚೀನಾ ಮತ್ತು ಯುರೋಪ್ ನಲ್ಲಿ ಲಾಕ್ ಡೌನ್ ನಿಂದ ಉಂಟಾದ ವಾಯು ಮಾಲಿನ್ಯ ಇಳಿಕೆ ಪ್ರಮಾಣದ ಬಗ್ಗೆ ವರದಿ ಮಾಡಲಾಗಿದೆ. ವಾಯು ಮಾಲಿನ್ಯ ಕಡಿಮೆಯಾಗ್ತಿದ್ದಂತೆ ಆರೋಗ್ಯದ ಮೇಲೆ ಅದು ಪ್ರಭಾವ ಬೀರಲಿದೆ. ವಾಯುಮಾಲಿನ್ಯ ನಿರಂತರವಾಗಿ ಕಡಿಮೆಯಾಗ್ತಿದ್ದಂತೆ ಕೊರೊನಾ ಮಾತ್ರವಲ್ಲದೆ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಸಾಂಕ್ರಾಮಿಕ ರೋಗಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.