ಕೊರೊನಾ ಭೀತಿಯಿಂದ ಸೀನು ಬಂದರೂ ಹೆದರುವಂತಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು ಬಂದರೂ ಕೊರೊನಾ ಎಂದು ಭೀತಿಗೊಳಗಾಗಬೇಕಿಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯದಿರಿ.
ಮಳೆಗಾಲದಲ್ಲಿ ವೈರಲ್ ಫಿವರ್ ಬರುವುದು ಸಾಮಾನ್ಯ. ಆದರೆ ಅದರ ಮತ್ತು ಕೊರೋನಾದ ಮಧ್ಯೆ ವ್ಯತ್ಯಾಸ ಕಂಡುಹಿಡಿಯುವುದು ಬಹಳ ಕಷ್ಟ ಎನ್ನುತ್ತಾರೆ ವೈದ್ಯರು.
ಸಕ್ಕರೆ ಕಾಯಿಲೆ, ಹೃದಯಸಂಬಂಧಿ ಸಮಸ್ಯೆ ಇರುವವರು, ಅಸ್ತಮಾ ಮತ್ತು ದೀರ್ಘಕಾಲದ ರೋಗಗಳಿಗೆ ತುತ್ತಾದವರು ಕೊರೊನಾಗೆ ಬೇಗ ಸಿಲುಕಿ ಹಾಕಿಕೊಳ್ಳುತ್ತಾರೆ. ಅಂಥವರ ಬಗ್ಗೆ ಎಚ್ಚರ ವಹಿಸಬೇಕಾದ್ದು ಮುಖ್ಯ.
ಕೆಲಸದ ನಿಮಿತ್ತ ಮನೆಯಿಂದ ನಿತ್ಯ ಹೊರಹೋಗುವ ಮಂದಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇದರ ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ.