ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಭಾರಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಗುರುವಾರ ಒಂದೇ ದಿನ 20,903 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಇದರಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 6.25 ಲಕ್ಷದ ಗಡಿ ದಾಟಿದೆ.
ಈ ಮಾರಣಾಂತಿಕ ರೋಗಕ್ಕೆ ಈವರೆಗೆ 18 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹೀಗಾಗಿ ಎಲ್ಲೆಡೆ ಆತಂಕ ಮನೆಮಾಡಿದೆ. ಅದರಲ್ಲೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ತಗುಲುತ್ತಿರುವುದು ಗಾಬರಿ ಹುಟ್ಟಿಸುವಂತಿದೆ.
ಇದರ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ಶುಭ ಸುದ್ದಿಯೊಂದನ್ನು ನೀಡಿದ್ದು, ಕೊರೊನಾ ಸೋಂಕಿತರ ಪೈಕಿ ಶೇಕಡ 60 ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ. ವೇಗವಾಗಿ ನಡೆಯುತ್ತಿರುವ ಸೋಂಕು ಪರೀಕ್ಷೆ ಮತ್ತು ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಿರುವ ಕಾರಣ ಈ ಬೆಳವಣಿಗೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಗಮನಾರ್ಹ ಸಂಗತಿಯೆಂದರೆ ಗುರುವಾರ ಒಂದೇ ದಿನ 20 ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.